ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ . 
ಜಿಲ್ಲೆ

ನೌಕರರ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸುವಲ್ಲಿ ಶ್ರಮ: ಆಯನೂರು

ಶಿವಮೊಗ್ಗ: ಹಳೇ ಪಿಂಚಣಿ ವ್ಯವಸ್ಥೆ ಜಾರಿ, ಬಡ್ತಿ, ವರ್ಗಾವಣೆ ಸೇರಿ ನಾನಾ ಸಮಸ್ಯೆಗಳಿವೆ. ಗೆದ್ದ ಮೇಲೆ ಮೇಲ್ಮನೆಯಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ನನ್ನ ಗುರಿ ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.

ಆರೂ ಜಿಲ್ಲೆಗಳಲ್ಲೂ ಪ್ರವಾಸ ಮಾಡಿದ್ದು, ನನ್ನ ಪರವಾಗಿ ಉತ್ತಮ ವಾತಾವರಣವಿದೆ. ನನ್ನ ಬಗ್ಗೆ ಮತದಾರರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಈಗಾಗಲೇ ನೌಕರರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವಲ್ಲಿ ಶ್ರಮಿಸಿದ್ದೇನೆ. ನನ್ನ ಹೋರಾಟದ ಹಿನ್ನೆಲೆಯಲ್ಲಿಯೇ ಮತ ಕೇಳುತ್ತೇನೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಣ, ಮದ್ಯ, ಜಾತಿ, ಧರ್ಮದ ಆಧಾರದ ಮೇಲೆ ನಾನು ಮತ ಕೇಳುತ್ತಿಲ್ಲ. ಇದುವರೆಗೆ ಪದವೀಧರರ ಮತ್ತು ಸರ್ಕಾರಿ ನೌಕರರ ಪರವಾಗಿ ಕೆಲಸ ಮಾಡಿರುವುದನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇನೆ. ಅತಿಥಿ ಉಪನ್ಯಾಸಕರ ಕಷ್ಟಗಳ ಅರಿವು, ಅನುದಾನಿತ ಶಾಲಾ ಕಾಲೇಜುಗಳ ಸಮಸ್ಯೆಗಳು ಗೊತ್ತಿವೆ. 7ನೇ ವೇತನ ಆಯೋಗ ಜಾರಿಯಾಗಬೇಕಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಖಂಡಿತ ಬಗೆಹರಿಸುತ್ತೇನೆ ಎಂದರು.
ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಮುಖಂಡರಾದ ಎಂ.ಶ್ರೀಕಾಂತ್, ಎಂ.ರಮೇಶ್ ಶೆಟ್ಟಿ ಶಂಕರಘಟ್ಟ, ಶಾಂತವೀರ ನಾಯಕ್, ಇಕ್ಕೇರಿ ರಮೇಶ್, ಜಿ.ಪದ್ಮನಾಭ್, ಶಿ.ಜು.ಪಾಶ, ಜಿ.ಡಿ.ಮಂಜುನಾಥ್, ಚಾಮರಾಜ್ ಸುದ್ದಿಗೋಷ್ಠಿಯಲ್ಲಿದ್ದರು.