ಅಂಕೋಲಾ: ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ದುರಂತ ನಿಜಕ್ಕೂ ಆಘಾತ ತರಿಸಿದೆ. ನೊಂದ ಕುಟುಂಬಗಳಿಗೆ ಸರ್ಕಾರದಿಂದ 5 ಲಕ್ಷ ರೂ.ಪರಿಹಾರ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಮಣ್ಣಿನಡಿ ಸಿಲುಕಿದೆ ಎನ್ನಲಾದ ಲಾರಿ ಹಾಗೂ ಚಾಲಕ ಮತ್ತು ಇನ್ನುಳಿದವರ ಪತ್ತೆಗಾಗಿ ರಡಾರ್ ತಂತ್ರಜ್ಞಾನ ಬಳಸಲಾಗಿದೆ. ಆದರೆ, ಇದುವರೆಗೂ ಕುರುಹು ಸಿಕ್ಕಿಲ್ಲ ಎಂದರು.
ಕೇರಳದ ಮಾಧ್ಯಗಳು ಕರ್ನಾಟಕ ಸರ್ಕಾರದ ವಿರುದ್ಧ ತೆರವು ಕಾರ್ಯ ವಿಳಂಬವಾಗಿರುವುದಕ್ಕೆ ಟೀಕಿಸಿ ಸುದ್ದಿ ಪ್ರಸಾರ ಮಾಡುತ್ತಿರುವ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಬೇರೆ ಬೇರೆ ರಾಜ್ಯಗಳಲ್ಲಿ ಕರ್ನಾಟಕದವರು ಸಮಸ್ಯೆಗೆ ಸಿಲುಕುತ್ತಾರೆ. ಅಂತಹ ಸಂದರ್ಭದಲ್ಲಿ ನಾವು ಆ ರಾಜ್ಯದ ಸಹಕಾರ ಪಡೆದು ಅವರನ್ನು ಕರೆತರುವ ಕಾರ್ಯ ಮಾಡುತ್ತೇವೆ. ಮರಳುವಾಗ ಆ ಸರ್ಕಾರಕ್ಕೆ ಧನ್ಯವಾದ ಹೇಳಿ ಬರುತ್ತೇವೆ. ಆದರೆ, ಕೇರಳದವರು ಅವರ ಮನಸ್ಥಿತಗೆ ತಕ್ಕಂತೆ ಸುದ್ದಿಮಾಡಲಿ ಅದಕ್ಕೆ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಘಟನೆಗೆ ಸಂಬಂಧಿಸಿದಂತೆ ಸಚಿವರು ಅಧಿಕಾರಿಗಳಿಂದ ವಿವಿಧ ಮಾಹಿತಿ ಪಡೆದುಕೊಂಡರು. ನಂತರ ಹಾರವಾಡಕ್ಕೆ ತೆರಳಿ ಸಮುದ್ರ ಕೊರೆತ ಪರಿಶೀಲಿಸಿದರು. ಶಾಸಕ ಸತೀಶ ಸೈಲ್, ಶಂಭು ಶೆಟ್ಟಿ, ಡಿವೈಎಸ್ಪಿ ಗಿರೀಶ ಇತರರಿದ್ದರು.