ಮಡಿಕೇರಿ: ಜಿಲ್ಲೆಯ ಪತ್ರಕರ್ತರಿಗೆ ನಿವೇಶನ ಒದಗಿಸುವ ಬೇಡಿಕೆಗೆ ಸ್ಪಂದಿಸುತ್ತೇನೆ. ಸರ್ಕಾರ ಮಟ್ಟದಲ್ಲಿ ಈ ಬಗ್ಗೆ ಚರ್ಚಿಸುತ್ತೇನೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಭರವಸೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಮಹಾಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮ ಸಂಸ್ಥೆ ಮುನ್ನಡೆಸುವುದು ಸವಾಲಿನ ಕೆಲಸ. ಸಂಸ್ಥೆಗಳು ಆರ್ಥಿಕ ಸಂಕಷ್ಟದ ನಡುವೆ ಕೆಲಸ ಮಾಡುತ್ತಿವೆ. ಜಿಲ್ಲಾ ಮಟ್ಟದಲ್ಲಿಯೂ ಪತ್ರಕರ್ತರು ಸಂಕಷ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳ ನಡುವೆ ಪತ್ರಕರ್ತರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹೆಸರುಗಳಿಸಿದ ಪತ್ರಿಕೆಯೊಂದು ನಷ್ಟದಿಂದ ವಾರಗಳ ಕಾಲ ಸ್ಥಗಿತಗೊಂಡಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ವಾರ್ತಾ ಇಲಾಖೆ ಮೂಲಕ ಕಚ್ಛಾವಸ್ತು ಖರೀದಿಗೆ ನೆರವು ನೀಡಿದ್ದರು. ಆದರೆ, ಕುಮಾರಸ್ವಾಮಿ ವಿರುದ್ಧವೇ ಮುಖಪುಟದಲ್ಲಿ ವರದಿ ಪ್ರಕಟವಾಗಿತ್ತು. ಇದು ಮಾಧ್ಯಮದ ಜವಾಬ್ದಾರಿ ಪ್ರದರ್ಶಿಸುತ್ತದೆ. ಆಸಕ್ತಿ, ಜನಪರ ಕಾಳಜಿ ಇದ್ದರೆ ಮಾತ್ರ ಪತ್ರಕರ್ತನಾಗಲು ಸಾಧ್ಯ. ತಾನು ಮುಖ್ಯಮಂತ್ರಿಗಳೊಂದಿಗೆ ನಿಕಟ ಸಂಪರ್ಕದಲ್ಲಿರಬಹುದು. ಆದರೆ, ತನಗೆ ಕ್ಷೇತ್ರದ ಜನರು ಮುಖ್ಯ. ಈ ಹಿನ್ನೆಲೆ ಕ್ಷೇತ್ರದಲ್ಲಿ ಹೆಚ್ಚಾಗಿ ಇರುತ್ತೇನೆ. ವರದಿಗಾರಿಕೆಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಸಂಘಟಿತರಾಗಿ ಕೆಲಸ ಮಾಡಿದರೆ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪಾಲ್ಗೊಂಡು ಮಾತನಾಡಿ, ಪತ್ರಕರ್ತ ವೃತ್ತಿ ಶೋಕಿ ಅಲ್ಲ. ಸಾಮಾಜಿಕ ಬದ್ಧತೆ ಇರಬೇಕು. ಪತ್ರಕರ್ತರು ದಾರ್ಶನಿಕವಾಗಿರಬೇಕೆಂದು ಸಮಾಜ ಬಯಸುತ್ತದೆ. ಈ ರೀತಿ ನಾವು ನಡೆದರೆ ಜನರು ನಮ್ಮನ್ನು ಉನ್ನತ ಸ್ಥಾನದಲ್ಲಿಡುತ್ತಾರೆ. ಜವಾಬ್ದಾರಿಯಿಂದ ವಿಮುಖರಾದರೆ ವೃತ್ತಿ ಬದ್ಧತೆ ಉಳಿಸಿಕೊಳ್ಳಲಾಗುವುದಿಲ್ಲ. ಇಂದು ಜೊಳ್ಳು ಪತ್ರಕರ್ತರು ಹೆಚ್ಚಾಗುತ್ತಿದ್ದಾರೆ. ಧಾವಂತದಲ್ಲಿ ವೃತ್ತಿಗೆ ಬಂದು ಬೇರೆ ಮಾರ್ಗದಲ್ಲಿ ಹೋಗುತ್ತಿರುವುದು ವಿಷಾದನೀಯ. ವೃತ್ತಿಗೆ ನ್ಯಾಯ ಕೊಡುವುದರೊಂದಿಗೆ ಸಮಾಜಕ್ಕೆ ಬೆಳಕಾಗಿ ನೊಂದವರಿಗೆ ಧನಿಯಾಗಬೇಕು ಎಂದು ಕರೆ ನೀಡಿದರು.
ಬ್ಲ್ಯಾಕ್ ಮೇಲ್ ಹಾಗೂ ಐಡಿಂಟೆಟಿಗಾಗಿ ಬರುವವರು ಹೆಚ್ಚಾಗಿದ್ದಾರೆ. ವೃತ್ತಿಯನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸರ್ವೋಚ್ಛ ನ್ಯಾಯಾಧೀಶರೆ ನ್ಯಾಯಾದಾನ ವಿಚಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಇದು ಪತ್ರಿಕಾರಂಗದ ವಿಶ್ವಾಸರ್ಹತೆಯನ್ನು ಸಾಬೀತುಪಡಿಸುತ್ತದೆ. ಸುದ್ದಿಗಳು ಇಂದು ಸುಲಭವಾಗಿ ದೊರೆಯುತ್ತದೆ. ಆದರೆ, ನೈಜಾಂಶ ಪರಿಶೀಲಿಸಿ ವರದಿ ಮಾಡಬೇಕಾದ ಸವಾಲಿದೆ. ಸುದ್ದಿಯನ್ನು ಹೆಕ್ಕಿತೆಗೆಯುವ ಜಾಣ್ಮೆ ಹಾಗೂ ತಾಳ್ಮೆ ಪತ್ರಕರ್ತರಿಗೆ ಇರಬೇಕು ಎಂದ ಸಲಹೆ ನೀಡಿದ ಅವರು, ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕ್ರಮಕೈಗೊಳ್ಳುವ ಕಾನೂನು ರೂಪುಗೊಳ್ಳುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಕ್ಷೇತ್ರ ಪ್ರಮುಖ ಅಂಗ. ಅಧುನೀಕ ಕಾಲಘಟ್ಟದಲ್ಲಿ ಪತ್ರಕರ್ತರು ಆತ್ಮಾವಲೋಕನದ ಮಾಡಿಕೊಳ್ಳುವ ಅಗತ್ಯ ಇದೆ. ಪತ್ರಕರ್ತರು ಸಮಾಜದ ಕನ್ನಡಿ. ಪ್ರಭಾವಕ್ಕೆ ಒಳಗಾಗಿ ಕೆಲವೊಂದು ಸುದ್ದಿಗಳು ನೈಜಾಂಶ ಕಳೆದುಕೊಂಡಿವೆ. ಪತ್ರಕರ್ತರು ಜಿಲ್ಲೆಯ ಸಮಸ್ಯೆಯ ಬಗ್ಗೆ ವರದಿ ಮೂಲಕ ಸರಕಾರವನ್ನು ಎಚ್ಚರಿಸಸಬೇಕೆಂದು ಹೇಳಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತರು ಸಂಕಷ್ಟದಲ್ಲಿ, ಸವಾಲಿನ ನಡುವೆ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ನಿವೇಶನ ದೊರಕಬೇಕು. ಶಾಸಕರು ಈ ಬೇಡಿಕೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ ಅವರು, ವರದಿ ಮೂಲಕ ಸಮಾಜದ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಪತ್ರಕರ್ತರಿಗಿದೆ ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಪತ್ರಕರ್ತರು ವಿಶೇಷ ವರದಿಗಳ ಮೂಲಕ ಗಮನ ಸೆಳೆಯುವ ಕೆಲಸ ಮಾಡಬೇಕು. ಪ್ರಶಸ್ತಿಗಳಿಂದ ಗೌರವ ಹೆಚ್ಚಾಗುವುದರ ಜೊತೆಗೆ ವೃತ್ತಿಯಲ್ಲಿ ಪ್ರವರ್ಧಮಾನಕ್ಕೆ ಹೋಗಬಹುದು ಎಂದು ಕಿವಿಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯ ಸುನಿಲ್ ಪೊನ್ನೇಟ್ಟಿ, ರಾಜ್ಯ ಸಮಿತಿ ಸದಸ್ಯ ಟಿ.ಎನ್.ಮಂಜುನಾಥ್ ಇದ್ದರು. ಚನ್ನನಾಯಕ್ ಪ್ರಾರ್ಥಿಸಿ, ಆನಂದ್ ಕೊಡಗು, ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿ, ಅನುಕಾರ್ಯಪ್ಪ ಸ್ವಾಗತಿಸಿ, ವಾಸು ಆಚಾರ್ಯ ವಂದಿಸಿದರು.
ಮಹಾಸಭೆ: ಪ್ರಶಸ್ತಿ ಪ್ರದಾನಕ್ಕೆ ಮುನ್ನ ಸಂಘದ ವಾರ್ಷಿಕ ಮಹಾಸಭೆ ಜಿಲ್ಲಾಧ್ಯಕ್ಷೆ ಬಿ.ಆರ್.ಸವಿತಾ ರೈ ಅಧ್ಯಕ್ಷತೆಯಲ್ಲಿ ನಡೆಯಿತು. ಖಜಾಂಜಿ ಆನಂದ್ ಕೊಡಗು ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ವಾರ್ಷಿಕ ವರದಿ ವಾಚಿಸಿದರು.
೧೭ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ
ಕಾಯಪಂಡ ಶಶಿ ಸೋಮಯ್ಯ, ಎಚ್.ಕೆ.ಜಗದೀಶ್, ಕುಯ್ಯಮುಡಿ ಸುನಿಲ್, ಆನಂದ್ ಕೊಡಗು, ಕೆ.ಬಿ.ದಿವಾಕರ್, ಹಿರಿಕರ ರವಿ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಎಸ್.ರವಿ, ಆದರ್ಶ್ ಅದ್ಕಲೇಗಾರ್, ದಿನೇಶ್ ಮಾಲಂಬಿ, ಮಲ್ಲಿಕಾರ್ಜುನ, ಬಾಚರಣಿಯಂಡ ಅನುಕಾರ್ಯಪ್ಪ, ವಿಶ್ವ ಕುಂಬೂರು, ಕಿಶೋರ್ ರೈ ಕತ್ತಲೆ ಕಾಡು, ಜಗದೀಶ್ ಜೋಡುಬೀಟಿ, ಪುತ್ತರೀರ ಕರುಣ್ ಕಾಳಯ್ಯ, ಅಜ್ಜಿನಿಕಂಡ ಮಹೇಶ್ ನಾಚಯ್ಯ, ಉಳ್ಳಿಯಡ ಎಂ.ಪೂವಯ್ಯ ಅವರನ್ನು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.