ಎನ್.ಆರ್.ಪುರದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಆಲ್ದಾರ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಟಿ.ರಾಜಪ್ಪ ಅವರನ್ನು ಸನ್ಮಾನಿಸಲಾಯಿತು. ಪೂರ್ಣೇಶ್, ಬಿ.ನಂಜುಂಡಪ್ಪ, ಕೆ.ಎಚ್.ಗಂಗಾಧರಪ್ಪ, ಮಹೇಶ್ ಇದ್ದರು. 
ಜಿಲ್ಲೆ

ಮನೆ, ಮನೆಗಳಲ್ಲೂ ಕನ್ನಡ ಅರಳಿಸಲು ಕಸಾಪ ಶ್ರಮ

ಎನ್.ಆರ್.ಪುರ: ಕನ್ನಡ ಸಾಹಿತ್ಯ ಪರಿಷತ್ ನಡಿಗೆ ಹಳ್ಳಿಯ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗ್ರಾಮೀಣ ಭಾಗದ ಮನೆ, ಮನೆಗಳಲ್ಲೂ ಕನ್ನಡ ಭಾಷೆ ಅರಳಿಸುತ್ತಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಹೇಳಿದರು.
ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಉಪನ್ಯಾಸ, ಒಗಟು ಬಿಡಿಸುವ ಸ್ಪರ್ಧೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕು ಕಸಾಪ ಕನ್ನಡ ಭಾಷೆ, ಸಂಸ್ಕೃತಿ, ಜಾನಪದ ಕಲೆ ಉಳಿಸುವ ದೃಷ್ಟಿಯಿಂದ ಪ್ರತಿ ಹಳ್ಳಿಗಳಲ್ಲೂ ಕಾರ್ಯಕ್ರಮ ನಡೆಸುತ್ತಿದೆ. ಗ್ರಾಮೀಣ ಭಾಗದ ಮಣ್ಣಿನ ಸೊಗಡು ಬಿಂಬಿಸುವ ಕಲೆ, ಕಲಾವಿದರನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದರು.
ಕಸಾಪ ಜಿಲ್ಲಾ ಸಂಚಾಲಕ ಬಿ.ನಂಜುಂಡಪ್ಪ ಮಾತನಾಡಿ, ಗ್ರಾಮೀಣ ಭಾಗದ ಅಭಿವೃದ್ಧಿ ಯಾಗಬೇಕಾದರೆ ಪ್ರತಿಯೊಬ್ಬರು ಶಿಕ್ಷಣ ಕಲಿಯಬೇಕು. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂದು ಹೇಳಿದರು.
ಶಿಕ್ಷಕ ಕೆ.ಎಚ್.ಗಂಗಾಧರಪ್ಪ ಹಳ್ಳಿ ಬದುಕಿನಲ್ಲಿ ಶಿಕ್ಷಣದ ಮಹತ್ವ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಅವಶ್ಯಕತೆ ಇದೆ. ಆಧುನಿಕ ಪ್ರಪಂಚದಲ್ಲಿ ತಂತ್ರಜ್ಞಾನ ಮುಂದುವರಿದಿದ್ದು ಶಿಕ್ಷಣವಿಲ್ಲದ ಅನೇಕ ಹಳ್ಳಿಗರು ವ್ಯವಹಾರದಲ್ಲಿ ಮೋಸ ಹೋಗುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಭಾಗದ ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಕರೆ ನೀಡಿದರು.
ಆಲ್ದಾರ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಟಿ.ರಾಜಪ್ಪ, ಅಂಗನವಾಡಿ ಕಾರ್ಯಕರ್ತೆ ಗಾಯಿತ್ರಿ ಅವರನ್ನು ಸನ್ಮಾನಿಸಲಾಯಿತು. ಮುತ್ತಿನಕೊಪ್ಪ ಗ್ರಾಪಂ ಸದಸ್ಯೆ ಸುಜಾತಾ, ಮಾಜಿ ಗ್ರಾಪಂ ಸದಸ್ಯ ಮಹೇಶ್, ಗಾಯಿತ್ರಿ ಉಪಸ್ಥಿತರಿದ್ದರು.