ಧಾರವಾಡ: ಕರೊನಾ ನಂತರ ಪ್ರಾರಂಭವಾದ ಶಾಲೆ ಹಾಗೂ ವಿದ್ಯಾಗಮ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಹಾಗೂ ಯಶಸ್ಸುಗೊಳಿಸುವ ಜವಾಬ್ದಾರಿ ಮುಖ್ಯಾಧ್ಯಾಪಕರು ಮತ್ತು ಶೈಕ್ಷಣಿಕ ಮೇಲ್ವಿಚಾರಕರ ಮೇಲಿದೆ ಎಂದು ಡಿಡಿಪಿಐ ಮೋಹನಕುಮಾರ ಹಂಚಾಟೆ ಹೇಳಿದರು.
ಇಲ್ಲಿನ ಶಹರ ಶಿಕ್ಷಣಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಜರುಗಿದ ವಿದ್ಯಾಗಮ ಹಾಗೂ ಎಸ್ಸೆಸ್ಸೆಲ್ಸಿ ತರಗತಿಗಳ ಅನುಷ್ಠಾನ ಕುರಿತು ಮುಖ್ಯಾಧ್ಯಾಪಕರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
6ರಿಂದ 9ನೇ ತರಗತಿಗಳಿಗೆ ವಿದ್ಯಾಗಮ ಕಾರ್ಯಕ್ರಮ ಮಕ್ಕಳಿಗೆ ಕಲಿಕೆಗೆ ಪೂರಕವಾಗಿದೆ. ಅದನ್ನು ಕಾಳಜಿಪೂರ್ವಕವಾಗಿ ಅನುಷ್ಠಾನಗೊಳಿಸಬೇಕು. ಜತೆಗೆ ಎಸ್ಸೆಸ್ಸೆಲ್ಸಿ ತರಗತಿಗಳನ್ನು ಪರಿಣಾಮಕಾರಿಯಾಗಿ ನಡೆಸುವುದು ಅಗತ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಮಾತನಾಡಿ, ಮಕ್ಕಳು ವಿದ್ಯಾಗಮ ಹಾಗೂ ಎಸ್ಸೆಸ್ಸೆಲ್ಸಿ ತರಗತಿಗಳಿಗೆ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಮಕ್ಕಳ ದಾಖಲಾತಿಯ ಹೆಚ್ಚಳಕ್ಕೆ ಎಲ್ಲ ಶಿಕ್ಷಕರು ಶ್ರಮ ವಹಿಸಬೇಕು. ಶಾಲೆಯ ಸ್ವಚ್ಛತೆ, ಕೋವಿಡ್ ಸುರಕ್ಷತಾ ಕ್ರಮಗಳ ಉಲ್ಲಂಘನೆಯಾಗದಂತೆ ಜಾಗೃತಿ ವಹಿಸಬೇಕು ಎಂದರು.
ಶಹರ ವಲಯದ ಸಮನ್ವಯಾಧಿಕಾರಿ ಎಂ.ವಿ. ಅಡಿವೇರ ಮಾತನಾಡಿ, ಎಲ್ಲ ಶಿಕ್ಷಕರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಪ್ರಮಾಣಪತ್ರ ಪಡೆಯಬೇಕು. ಪ್ರತಿದಿನ ಮಕ್ಕಳ ಹಾಜರಾತಿ ಹಾಗೂ ಅಂಕಿ ಅಂಶವನ್ನು ನೀಡುವುದು ಮುಖ್ಯಾಧ್ಯಾಪಕರ ಪ್ರಮುಖ ಜವಾಬ್ದಾರಿ ಎಂದರು.
ಶಿಕ್ಷಣಾಧಿಕಾರಿಗಳಾದ ಶಿವಲೀಲಾ ಕಳಸಣ್ಣವರ, ವಿದ್ಯಾಗಮ ನೋಡಲ್ ಅಧಿಕಾರಿ ಎಚ್. ಜಯಲಕ್ಷ್ಮೀ, ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು, ಶಿಕ್ಷಕರು ಹಾಗೂ ಶೈಕ್ಷಣಿಕ ಮೇಲ್ವಿಚಾರಕರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ವಿಜಯಕುಮಾರ ಕರಿಕಟ್ಟಿ ಹಾಗೂ ಶಕುಂತಲಾ ಗಡೆಂಕನಹಳ್ಳಿ ನಿರೂಪಿಸಿದರು.