ಮೈಸೂರು: ಅಪೂರ್ವ ಸ್ನೇಹ ಬಳಗದಿಂದ ನಗರದ ಆರ್‌ಟಿಒ ವೃತದಲ್ಲಿರುವ ಸರ್ಕಾರಿ ತಮಿಳು ಶಾಲೆಯ ಮಕ್ಕಳಿಗೆ ಪುಸ್ತಕ ಹಾಗೂ ಲೇಖನಿಗಳನ್ನು ನೀಡುವ ಮೂಲಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸಲಾಯಿತು.
ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಮೈಸೂರು ರಾಜ್ಯದ ಗದ್ದುಗೆ ಏರಿ, ಹಲವು ಪರಿವರ್ತನೆಗಳಿಗೆ ನಾಂದಿ ಹಾಡಿದ ಮುಮ್ಮಡಿ ಕೃಷ್ಣರಾಜ ಒಡೆಯರ ಜಯಂತಿ ಆಚರಣೆ ಅರ್ಥಪೂರ್ಣವಾಗಿದೆ ಎಂದು ಮುಡಾ ಮಾಜಿ ಸದಸ್ಯೆ ಲಕ್ಷ್ಮೀದೇವಿ ಹೇಳಿದರು.
ಮೈಸೂರು ಸಂಸ್ಥಾನದ 22ನೇ ದೊರೆಗಳಾಗಿ ರಾಜ್ಯಭಾರವನ್ನು ಸಮರ್ಥವಾಗಿ ನಡೆಸಿದವರು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಅತ್ಯಂತ ಕಷ್ಟಕರವಾಗಿದ್ದ ಸಂದರ್ಭದಲ್ಲಿಯೂ ಸಮರ್ಥವಾಗಿ ಕಾರ್ಯನಿರ್ವಹಿಸಿದರು. 1794ರಲ್ಲಿ ಶ್ರೀರಂಗಪಟ್ಟಣದಲ್ಲಿ ಜನಿಸಿದ ಅವರು 1799ರಲ್ಲಿ ಪಟ್ಟಾಧಿಕಾರವನ್ನು ಪಡೆಯುತ್ತಾರೆ. ಟಿಪ್ಪು ಮರಣ ನಂತರ ಮೈಸೂರು ಸಂಸ್ಥಾನದ ಆಡಳಿತವನ್ನು ಮೈಸೂರು ರಾಜರಿಗೆ ನೀಡಬೇಕೆಂಬ ಇಚ್ಛೆಯಿಂದ ಬ್ರಿಟಿಷರು ಕೊಟ್ಟ ಸಂದರ್ಭದಲ್ಲಿ ಅವರಿಗೆ ಐದು ವರ್ಷಗಳು. ಅವರ ತಾಯಿ ಲಕ್ಷ್ಮಮ್ಮಣಿ ಮತ್ತು ದಿವಾನ್ ಪೂರ್ಣಯ್ಯ ಅವರ ಸಹಕಾರದೊಂದಿಗೆ ಅವರು ತಮ್ಮ ರಾಜ್ಯಭಾರವನ್ನು ಮುಂದುವರಿಸುತ್ತಾರೆ ಎಂದರು.
ನಂತರದಲ್ಲಿ ಅವರು ವಿದ್ಯಾಭ್ಯಾಸ ಮಾಡಿ ತಾಯಿಯ ಮರಣ ನಂತರ ಅಧಿಕಾರ ಮುಂದುವರಿಸುತ್ತಾರೆ. ಇದ್ದಷ್ಟು ದಿನಗಳೂ ಸಮರ್ಥವಾಗಿ, ಸಾಹಿತ್ಯಾತ್ಮಕವಾಗಿ, ಸಾಂಸ್ಕೃತಿಕವಾಗಿಯೂ ಒಳ್ಳೆಯ ಆಡಳಿತವನ್ನು ನೀಡಿದವರು ಮುಮ್ಮಡಿ ಕೃಷ್ಣರಾಜ ಒಡೆಯರ್ ಎಂದು ಬಣ್ಣಿಸಿದರು.
ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ನಗರ ಪಾಲಿಕೆ ಮಾಜಿ ನಾಮ ನಿರ್ದೇಶಿತ ಸದಸ್ಯ ಜಗದೀಶ್, ಕೆವಿಕೆ ಫೌಂಡೇಶನ್ ಅಧ್ಯಕ್ಷೆ ಖುಷಿ ವಿನು, ಶಾಲೆಯ ಮುಖ್ಯಶಿಕ್ಷಕಿ ವಳ್ಳಿ, ಶಿಕ್ಷಕಿ ನೀಲಾ, ಜಿ.ರಾಘವೇಂದ್ರ, ಎಸ್.ಎನ್. ರಾಜೇಶ್, ಪುರುಷೋತ್ತಮ್, ಜತ್ತಿ ಪ್ರಸಾದ್, ಸುಚೇಂದ್ರ, ರಾಜಕುಮಾರಿ ಇತರರು ಇದ್ದರು.