ಬಬಲೇಶ್ವರ ವಿಧಾನ ಸಭೆ ಕ್ಷೇತ್ರದ ತಿಕೋಟಾ ತಾಲೂಕಿನ ಜಾಲಗೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷಣ ನಳೀನಕುಮಾರ ಕಟೀಲ ನೇತೃತ್ವದ ತಂಡ ಬರ ಅಧ್ಯಯನ ನಡೆಸಿತು.  
ಜಿಲ್ಲೆ

ಬಿಜೆಪಿ ಬರ ಅಧ್ಯಯನ ಪ್ರವಾಸದ ಎಫೆಕ್ಟ್, ತಿಕೋಟಾ ಬರಪೀಡಿತ ಪಟ್ಟಿಗೆ ಸೇರ್ಪಡೆ, ಏನಿದು ಅಚ್ಚರಿ?

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ನೇತೃತ್ವದ ಬರದ ಅಧ್ಯಯನ ತಂಡ ಬಬಲೇಶ್ವರ ವಿಧಾನ ಸಭೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಂತೆ ಇತ್ತ ಬರಪೀಡಿತ ಪಟ್ಟಿಯಿಂದ ವಂಚಿತಗೊಂಡಿದ್ದ ತಿಕೋಟಾ ತಾಲೂಕು ನೂತನ ಹೆಚ್ಚುವರಿ ಪಟ್ಟಿಯಲ್ಲಿ ರಾರಾಜಿಸುತ್ತಿದೆ.

ಹೌದು, ಶನಿವಾರ ನಳೀನಕುಮಾರ ಕಟೀಲ ತಿಕೋಟಾ ತಾಲೂಕಿನ ಜಾಲಗೇರಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದ್ದರು. ಮಾತ್ರವಲ್ಲ, ಜಿಲ್ಲಾ ಉಸ್ತುವಾರಿ ಸಚಿವರೇ ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದ ತಿಕೋಟಾ ಬರಪೀಡಿತ ಪಟ್ಟಿಯಿಂದ ವಂಚಿತಗೊಂಡಿದೆ ಎಂದರೆ ಇನ್ನುಳಿದ ಪ್ರದೇಶಗಳ ಸ್ಥಿತಿ ಏನು? ಎಂದು ಲೇವಡಿ ಮಾಡಿದ್ದರು.

ಜಾಲಗೇರಿಯಲ್ಲಿ ಒಣಗಿ ನಿಂತ ಬೆಳೆಯನ್ನು ಕಂಡು ಅಲ್ಲಿನ ರೈತರನ್ನು ಕಟೀಲ ಹಾಗೂ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಮತ್ತಿತರ ಮಾಜಿ ಶಾಸಕರುಗಳು ಮಾತನಾಡಿಸಿ ಸಮಸ್ಯೆ ಆಲಿಸಿದ್ದರು. ನೀರಿಲ್ಲದೇ ಒಣಗುತ್ತಿರುವ ಬೆಳೆ ಬಗ್ಗೆ ರೈತರು ಗೋಳು ತೋಡಿಕೊಂಡಿದ್ದರು. ಸರ್ಕಾರದಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ಯಾವುದೇ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲವೆಂದು ರೈತರು ಅಲವತ್ತುಕೊಂಡಿದ್ದರು. ಬಳಿಕ ಬಿಜೆಪಿ ತಂಡ ನಾಗಠಾಣ ಹಾಗೂ ಬ.ಬಾಗೇವಾಡಿ ಕ್ಷೇತ್ರದ ಹಳ್ಳಿಗಳಿಗೆ ಭೇಟಿ ನೀಡಿ ಜಿಲ್ಲೆಯಿಂದ ನಿರ್ಗಮಿಸಿತು.

ಅದಾದ ಕೆಲವೇ ಗಂಟೆಯಲ್ಲಿ ರಾಜ್ಯ ಸರ್ಕಾರದಿಂದ ಹೊಸ ಆದೇಶ ಪ್ರಕಟಗೊಂಡಿದ್ದು, ಹೆಚ್ಚುವರಿ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ತಿಕೋಟಾ ಸೇರ್ಪಡೆಗೊಂಡಿದೆ. ಇದು ಬಿಜೆಪಿ ಬರ ಅಧ್ಯಯನದ ಫಲಶೃತಿ ಎಂದು ಆ ಪಕ್ಷದ ನಾಯಕರು ನಗೆ ಬೀರುತ್ತಿದ್ದಾರೆ.