ಶಿವಮೊಗ್ಗಕ್ಕೆ ಭಾನುವಾರ ಆಗಮಿಸಿದ್ದ ನಟ ಶಿವರಾಜ್‌ಕುಮಾರ್‌ಗೆ ಅಭಿಮಾನಿಗಳು ಪುಷ್ಪ ವೃಷ್ಟಿ ಮಾಡಿ ಸಂಭ್ರಮಿಸಿದರು. 
ಜಿಲ್ಲೆ

ಈಸೂರು ದಂಗೆ ಸಿನಿಮಾ ನಿಶ್ಚಿತ: ನಟ ಶಿವರಾಜ್‌ಕುಮಾರ್

ಅರವಿಂದ ಅಕ್ಲಾಪುರ

ಶಿವಮೊಗ್ಗ: ಭೈರತಿ ರಣಗಲ್ ಸಿನಿಮಾ ಯಶಸ್ವಿಯಾಗಿ ಸಾಕಷ್ಟು ಸುದ್ದಿ ಮಾಡುತ್ತಿರುವ ನಡುವೆಯೇ ಚಿತ್ರದ ನಾಯಕ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಭಾನುವಾರ ಶಿವಮೊಗ್ಗಕ್ಕೆ ಆಗಮಿಸಿ ಚಿತ್ರಮಂದಿರದ ಎದುರು ಸಂಭ್ರಮಾಚರಣೆ ಮಾಡಿದರು.

ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ಸಾಕಷ್ಟು ಖುಷಿಯಾಗಿದ್ದ ಶಿವಣ್ಣ, ಪತ್ನಿ ಗೀತಾ ಹೆಸರಿನ ಬ್ಯಾನರ್‌ನಡಿ ನಿರ್ಮಾಣಗೊಂಡ ರಣಗಲ್ ಅನ್ನು ಜನ ಮೆಚ್ಚಿದ್ದಾರೆ. ಇದು ನಮ್ಮ ಬ್ಯಾನರ್‌ನ ಎರಡನೇ ಚಿತ್ರ. ಚಿತ್ರ ವೀಕ್ಷಿಸಿ ಬೆಂಬಲಿಸುತ್ತಿರುವ ಕರುನಾಡಿನ ಅಭಿಮಾನಿ ದೇವರುಗಳಿಗೆ ಧನ್ಯವಾದ ಎಂದರು.

ಶಿವಣ್ಣ ನಿಗದಿತ ಸಮಯಕ್ಕಿಂತ ತಡವಾಗಿ ಬಂದರೂ ಅಭಿಮಾನಿಗಳ ಗುಂಪು ಅವರಿಗಾಗಿ ಬಿರುಬಿಸಿಲಿನಲ್ಲಿ ಕಾಯುತ್ತಿತ್ತು. ಅವರು ಕಾರಿಳಿಯುತ್ತಿದ್ದಂತೆ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಂದಾದರು. ಕೆಲವರಿಗೆ ಮಾತ್ರ ಫೋಟೋಗೆ ಅವಕಾಶ ಸಿಕ್ಕಿತು.

ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್‌ಕುಮಾರ್, ರಣಗಲ್‌ಗೆ ಜನರಿಂದ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಕಲೆಕ್ಷನ್ ಸಹ ಚೆನ್ನಾಗಿದೆ ಎಂದು ಖುಷಿಪಟ್ಟರು. ಈಗ ಆರೋಗ್ಯ ಸ್ವಲ್ಪ ಸುಧಾರಣೆಯಾಗಿದೆ. ಮುಂದಿನ ತಿಂಗಳು ಆಪರೇಷನ್ ಮಾಡಿಸಿಕೊಳ್ಳಲು ಅಮೆರಿಕಕ್ಕೆ ಹೋಗುತ್ತಿದ್ದೇನೆ ಎಂದರು.

ಬಹಳಷ್ಟು ವರ್ಷಗಳಿಂದ ಸದ್ದು ಮಾಡುತ್ತಿರುವ ಈಸೂರು ದಂಗೆ ಕುರಿತು ಚಿತ್ರ ಮಾಡುವುದು ನಿಶ್ಚಿತ. ಆ ಬಗ್ಗೆ ನಿರ್ಮಾಪಕರೊಂದಿಗೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮದೇ ಬ್ಯಾನರ್‌ನಲ್ಲಿ ಇನ್ನೊಂದು ಚಿತ್ರ ನಿರ್ಮಾಣವಾಗಲಿದೆ ಎಂದು ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದರು.