ಜಿಲ್ಲೆ

ನಮ್ಮ ಆಕ್ರೋಶ ಯಾರ ವಿರುದ್ಧ? ಈಶ್ವರಪ್ಪ ಪ್ರಶ್ನೆ

Shivamogga

ಶಿವಮೊಗ್ಗ: ನಾವೆಲ್ಲರೂ ಒಟ್ಟಾಗಿ ಹೋರಾಡಿದಾಗ ಮಾತ್ರ ಹಿಂದು ಸಂಘಟನೆಗಳ ಕಾರ್ಯಕರ್ತರ ಹತ್ಯೆಯನ್ನು ತಡೆಗಟ್ಟಲು ಸಾಧ್ಯ. ಸರ್ಕಾರ ಸಮರ್ಪಕವಾಗಿ ಕೆಲಸ ಮಾಡಿದೆ. 24 ತಾಸಿನಲ್ಲೇ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಹೀಗಿರುವಾಗ ನಾವು ಯಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು? ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಹತ್ಯೆಗಳು ನಡೆಯಬಾರದೇ ಎಂಬುದು ನಮ್ಮ ಆಶಯ. ಆದರೆ ಹುಡುಕಿ ಹುಡುಕಿ ಹಿಂದು ಸಂಘಟನೆ ಕಾರ್ಯಕರ್ತರನ್ನೇ ಹತ್ಯೆ ಮಾಡಲಾಗುತ್ತಿದೆ. ಎಲ್ಲೋ ತರಬೇತಿ ಪಡೆದು ಬರುವ ಮತಾಂಧರು ಇಲ್ಲಿ ಹತ್ಯೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಪ್ರದೇಶ ಮಾದರಿಯನ್ನು ಇಲ್ಲಿ ಅನುಸರಿಸಬೇಕೆಂಬುದು ಹಿಂದು ಕಾರ್ಯಕರ್ತರ ಬೇಡಿಕೆ. ಉತ್ತರಪ್ರದೇಶದಂತೆ ಇಲ್ಲಿಯೂ ಎನ್‌ಕೌಂಟರ್, ಬುಲ್ಡೋಜರ್ ಬಳಸಬೇಕೇ ಎಂಬುದನ್ನು ಎಲ್ಲರೂ ಕುಳಿತು ಚರ್ಚಿಸಬೇಕು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ಶಾ ಇದರ ಬಗ್ಗೆ ಸಲಹೆ ನೀಡಬೇಕೆಂದರು.

75ನೇ ಜನ್ಮದಿನದ ಸಂದರ್ಭದಲ್ಲಿ ನಾನು ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇನೆ. ಅವರ ಆಯಸ್ಸು ಇನ್ನೂ ವೃದ್ಧಿಯಾಗಲಿ. ರಾಷ್ಟ್ರ ಹಿತಕ್ಕಾಗಿ ಅವರು ಕೆಲಸ ಮಾಡಲಿ. ಆದರೆ ರಾಷ್ಟ್ರದ್ರೋಹಿಗಳನ್ನು ಅವರು ಬೆಂಬಲಿಸುವುದು ಬೇಡ ಎಂದು ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.

ಸಿದ್ದರಾಮೋತ್ಸವ ಮಾಡುವುದರಿಂದ ಸರ್ಕಾರಕ್ಕೇನೂ ತೊಂದರೆಯಿಲ್ಲ ಎಂದ ಈಶ್ವರಪ್ಪ, ನಮ್ಮ ಸಂಘಟನೆ ನಾವು ಮಾಡುತ್ತಿದ್ದೇವೆ. ತೊಂದರೆಯಾಗುವುದು ಕಾಂಗ್ರೆಸ್‌ಗೆ. ಆ ಪಕ್ಷದಲ್ಲಿ ಎಲ್ಲರೂ ಸಿಎಂ ಆಭ್ಯರ್ಥಿಗಳೇ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಎಸ್.ಆರ್.ಪಾಟೀಲ್ ಎಲ್ಲರೂ ಸಿಎಂ ಸ್ಥಾನದ ಬಯಕೆ ಹೊಂದಿದ್ದಾರೆ ಎಂದರು.

ಮೊದಲು ಚುನಾವಣೆ ನಡೆದು ಅವರಿಗೆ ಬಹುಮತ ಬರಲಿ ನೋಡೋಣ. ಆದರೂ ಸಮಾಜವಾದಿಯಾಗಿದ್ದ ಸಿದ್ದರಾಮಯ್ಯ ಅದ್ಧೂರಿ ಉತ್ಸವಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.