ಶಿವಮೊಗ್ಗ: ಅನಾಮಧೇಯ ಪತ್ರ ಬರೆದು ಬೆದರಿಕೆಯೊಡ್ಡಲು ಯತ್ನಿಸಿದವರು ಹೇಡಿಗಳು. ನನ್ನ ನಾಲಿಗೆ ಸೀಳುವುದು ಅಂತವರಿಂದ ಸಾಧ್ಯವೂ ಇಲ್ಲ. ಇಂತಹ ಬೆದರಿಕೆಗಳಿಗೆ ನಾನು ಕುಗ್ಗುವುದೂ ಇಲ್ಲ. ಹೆದರುವುದೂ ಇಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಯಾರು ಗೂಂಡಾಗಿರಿ ಮಾಡುತ್ತಾರೋ, ಕೊಲೆ ಮಾಡುತ್ತಾರೋ, ದರೋಡೆ ಮಾಡುತ್ತಾರೋ ಅಂತಹ ಮುಸಲ್ಮಾನರನ್ನು ಮುಸಲ್ಮಾನ್ ಗೂಂಡ ಎಂದು ಕರೆದಿದ್ದೇನೆ. ಎಲ್ಲಾ ಮುಸಲ್ಮಾನರನ್ನೂ ನಾನು ಆ ಭಾವನೆಯಿಂದ ಕಾಣುವುದಿಲ್ಲ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ನಾನು ಟಿಪ್ಪು ಸುಲ್ತಾನ್‌ಗೆ ಮುಸ್ಲಿಂ ಗೂಂಡ ಎಂದು ಕರೆದಿರುವುದನ್ನು ಅನಾಮಧೇಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕಾಗಿ ನನ್ನ ನಾಲಿಗೆ ತುಂಡಿಸುವ ಎಚ್ಚರಿಕೆ ನೀಡಿದ್ದಾರೆ. ಯಾವ ಮುಸಲ್ಮಾನರು ಗೂಂಡಾಗಿರಿ ಮಾಡುತ್ತಾರೋ ಅಂತವರನ್ನು ಗೂಂಡ ಎಂದು ಕರೆಯದೇ ಒಳ್ಳೆಯವರೆಂದು ಕರೆಯಬೇಕೇ? ಎಂದು ಪ್ರಶ್ನಿಸಿದರು.
ಹಿಂದು ಕಾರ್ಯಕರ್ತ ಹರ್ಷ, ಪ್ರವೀಣ್ ನೆಟ್ಟಾರು ಅವರನ್ನು ಹೇಡಿಗಳಂತೆ ಕೊಲೆ ಮಾಡಲಾಯಿತು. ಈಗ ಹೇಡಿಯೊಬ್ಬ ನನಗೆ ಅನಾಮಧೇಯ ಪತ್ರದ ಮೂಲಕ ಬೆದರಿಕೆ ಹಾಕಿದ್ದಾನೆ. ಇದಕ್ಕೆಲ್ಲ ಬೆದರುವವನು ನಾನಲ್ಲ ಎಂದು ಹೇಳಿದರು.
ಈ ಹಿಂದೆ ನನಗೆ ವಿದೇಶದಿಂದ ಬೆದರಿಕೆ ಕರೆ ಬಂದಿತ್ತು. ಆಗ ಪೊಲೀಸರು ಸಾಕಷ್ಟು ತನಿಖೆ ನಡೆಸಿದ್ದರು. ಆದರೆ ಯಾರು ಕರೆ ಮಾಡಿದ್ದು ಎಂಬುದು ಗೊತ್ತಾಗಲಿಲ್ಲ. ಈಗ ಪತ್ರ ಬರೆದಿರುವಾತ ನಮ್ಮ ರಾಜ್ಯದಲ್ಲೇ ಇರುವ ಸಾಧ್ಯತೆಯಿದೆ. ಪೊಲೀಸರು ಆತನನ್ನು ಪತ್ತ ಮಾಡುತ್ತಾರೆಂಬ ವಿಶ್ವಾಸವಿದೆ. ಬೆದರಿಕೆ ಪತ್ರ ಬಂದಿರುವ ಕಾರಣ ಹೆಚ್ಚಿನ ಭದ್ರತೆಯ ಅವಶ್ಯಕತೆ ನನಗಿಲ್ಲ ಎಂದು ತಿಳಿಸಿದರು.
ಬಹಿರಂಗ ಚರ್ಚೆಯಾಗಲಿ
ವೀರ ಸಾವರ್ಕರ್ ವಿಷಯ ಚರ್ಚೆಯಾಗುತ್ತಿದ್ದಂತೆಯೇ ದೇಶದ್ರೋಹಿಗಳ ಬಣ್ಣ ಬಯಲಾಗುತ್ತಿದೆ. ಸಾವರ್ಕರ್ ಅವರ ಬಗ್ಗೆ ಗೊಂದಲಗಳಿದ್ದಲ್ಲಿ ಬಹಿರಂಗ ಚರ್ಚೆಗೆ ಬರಲಿ. ಸಾವರ್ಕರ್ ದೇಶದ್ರೋಹಿ ಎನ್ನುವ ಬಗ್ಗೆ ಯಾರ ಬಳಿಯಾದರೂ ದಾಖಲೆಗಳಿದ್ದರೆ ಅದನ್ನು ಬಹಿರಂಗಗೊಳಿಸಲಿ. ಟಿಪ್ಪು ಎಂತಹ ದ್ರೋಹಿ ಎಂಬುದನ್ನು ನಾನು ಬಹಿರಂಗಗೊಳಿಸಲು ಸಿದ್ಧ ಎಂದು ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.