ಜಿಲ್ಲೆ

ಉತ್ತಮ ಸಮಾಜ ನಿರ್ಮಿಸುವ ಹೊಣೆ ಶಿಕ್ಷಕರದು,  ಪ್ರೊ. ಎಂ. ನಾಗರಾಜ ಅಭಿಮತ,  ಎಜ್ಯುಇನ್ ಸ್ಪೈರ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ

Dharwada - Basavaraj Idli

ಹುಬ್ಬಳ್ಳಿ: ಶಿಕ್ಷಕ ವೃತ್ತಿಗೆ ಅನೇಕರು ಆಕಸ್ಮಿಕವಾಗಿ ಬಂದರೂ ನಂತರದಲ್ಲಿ ಅದನ್ನು ಒಪ್ಪಿ ಅಪ್ಪಿಕೊಂಡವರು ಹಲವರು. ಬಹಳಷ್ಟು ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ಧನಾತ್ಮಕ ಚಿಂತನೆ ಅಳವಡಿಸಿಕೊಂಡು ಮುನ್ನಡೆದರೆ ಸಾಧಕರ ಗುಂಪಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಕೆಪಿಎಸ್ಸಿ ಮಾಜಿ ಸದಸ್ಯ ಪ್ರೊ. ಎಂ. ನಾಗರಾಜ ಅಭಿಪ್ರಾಯಪಟ್ಟರು.

ಸಂತೋಷ ಫೌಂಡೇಷನ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಇಲ್ಲಿಯ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಎಜ್ಯುಇನ್ ಸ್ಪೈರ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮನರಂಜನೆಯ ದಾಹದಲ್ಲಿ ಇಂದಿನ ಜಗತ್ತು ಕಳೆದುಹೋಗಿದೆ. ಶಾಲೆಯಲ್ಲಿ ನಡೆಯುವ ಪಾಲಕರ ಸಭೆಯಲ್ಲಿ "ಹೇಗಾದರೂ ಮಾಡಿ ಮೊಬೈಲ್ ಬಿಡಿಸಿ' ಎಂಬುದೊಂದೇ ಶಿಕ್ಷಕರಿಗೆ ಮಾಡುವ ಆಗ್ರಹವಾಗಿರುತ್ತದೆ. ಆದರೆ, ಪಾಲಕರು ಮೊದಲು ಮೊಬೈಲ್ ಬಿಡಬೇಕು ಎಂಬುದನ್ನು ಯಾರೂ ಅರಿತುಕೊಳ್ಳುವುದಿಲ್ಲ. ಮೊಬೈಲ್ ಸದ್ಬಳಕೆಯಾಗಲಿ ಎಂಬುದರತ್ತ ಎಲ್ಲರ ಗಮನ ಇರಬೇಕು. ಉತ್ತಮ ಸಮಾಜ ನಿರ್ಮಾಣದ ಹೊಣೆ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಫೌಂಡೇಷನ್ ಅಧ್ಯಕ್ಷ ಡಾ. ಸಂತೋಷ ಕೃಷ್ಣಾಪುರ ಮಾತನಾಡಿ, ಶಿಕ್ಷಣದ ಮೂಲಕ ಮುಂದಿನ ಪೀಳಿಗೆಯನ್ನು ಬಲಯುತಗೊಳಿಸಲು ಸಾಧ್ಯವಿದೆ. ಹಾಗಾಗಿ 2015ರಲ್ಲಿ ಆರಂಭವಾದ ಫೌಂಡೇಷನ್ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಏಕೈಕ ಉದ್ದೇಶದಿಂದ ಶೈಕ್ಷಣಿಕ ಸಾಧಕರಿಗೆ ಗೌರವಿಸುವ ಕಾರ್ಯಕ್ಕೆ ಮೊದಲ ಬಾರಿ ಮುಂದಾಗಿದ್ದೇವೆ ಎಂದರು.

ಪ್ರತಿ ವರ್ಷ ಇಂತಹ ಕಾರ್ಯಕ್ರಮ ನಡೆಸುವುದು, ಜತೆಗೆ ಪ್ರತಿಭಾವಂತರಿಗೆ ಶಿಷ್ಯವೇತನ ನೀಡುವುದು, ಉದ್ಯೋಗ ಮೇಳ ಆಯೋಜಿಸುವ ಉದ್ದೇಶವನ್ನು ಫೌಂಡೇಷನ್ ಹೊಂದಿದೆ ಎಂದು ಹೇಳಿದರು.

ಪ್ರೊ. ಸೌಮ್ಯಶ್ರೀ ಬಂಗೇರಾ, ಬ್ಯುಲಾ ಗ್ರೇಸ್ ಅವರು ಭವಿಷ್ಯದ ಉನ್ನತ ಶಿಕ್ಷಣ, ಭಾರತೀಯ ಶಿಕ್ಷಣ ಕುರಿತು ಉಪನ್ಯಾಸ ನೀಡಿದರು. ಕ್ರಿಶ್ಚಿಯನ್ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಪ್ರಶಾಂತ ಜತನ್ನಾ ಮಾತನಾಡಿದರು.

ಯಶುರತ್ನ ಕೃಷ್ಣಾಪುರ, ಮಣಿ ಕೃಷ್ಣಾಪುರ, ಎಂ.ಆರ್. ಪಾಟೀಲ, ಅನಿತಾ ರಾಜಕುಮಾರ, ವಿಲ್ಸನ್ ಹೊಂಬಲ, ಪ್ರೊ. ಹರಿಶ್ಚಂದ್ರ, ಹನುಮಾಕ್ಷಿ ಗೋಗಿ, ಡಾ. ದಿನೇಶ ನಾರಾಯಣಕರ, ಮಧು ಬಿ, ಡಾ. ಎಚ್.ವಿ. ಬೆಳಗಲಿ, ಡಾ. ಎಲ್.ಡಿ. ಹೊರಕೇರಿ, ಇತರರು ಪಾಲ್ಗೊಂಡಿದ್ದರು.
ಅರ್ಚನಾ ತ್ರಿಪಾಠಿ ಕಾರ್ಯಕ್ರಮ ನಿರೂಪಿಸಿದರು.