ಸೋಂಪುರ ಹೋಬಳಿಯ ಕೆಂಗಲ್ ಕೆಂಪೋಹಳ್ಳಿಯಲ್ಲಿ ಗ್ರಾಮಸ್ಥರೇ ನಿರ್ಮಿಸಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ನೂತನ ಕಟ್ಟಡವನ್ನು ಮಂಗಳವಾರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉದ್ಘಾಟಿದರು. ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಂಠಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ತಿಮ್ಮಯ್ಯ, ತಹಸೀಲ್ದಾರ್ ಕೆ.ಮಂಜುನಾಥ, ತಾಪಂ ಇಒ ಎಲ್.ಮೋಹನ್ ಕುಮಾರ್ ಇದ್ದರು. 
ಜಿಲ್ಲೆ

ಶೀಘ್ರ 15,000 ಶಿಕ್ಷಕರ ನೇಮಕಾತಿ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿನಾಗೇಶ್ ಮಾಹಿತಿ

ದಾಬಸ್‌ಪೇಟೆ: ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ 8,600 ನೂತನ ಶಾಲಾ ಕಟ್ಟಡ ಹಾಗೂ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿನಾಗೇಶ್ ತಿಳಿಸಿದರು.


ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಗ್ರಾಪಂನ ಕೆಂಗಲ್ ಕೆಂಪೋಹಳ್ಳಿಯಲ್ಲಿ ಗ್ರಾಮಸ್ಥರೇ 23 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದ ಅವರು, ಊರಿನ ದಾನಿಗಳೇ ಸೇರಿ ಶಾಲಾ ಕಟ್ಟಡ ಕಟ್ಟಿಸಿರುವುದು ಮಾದರಿ ಕಾರ್ಯ ಎಂದು ಶ್ಲಾಸಿದರು. ರಾಜ್ಯದಲ್ಲಿ 247 ಕೆಪಿಎಸ್ ಶಾಲೆಗಳಿವೆ. ಆಂಗ್ಲ ಮಾಧ್ಯಮದಲ್ಲಿ ಬೋಧನೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.


ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಜ್ಞಾನ ಒಂದೇ ಉತ್ತಮ ಮಾರ್ಗವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಉತ್ತಮ ಕಲಿಕೆಗೆ ಅವಕಾಶವಾಗಿದೆ. ಸರ್ಕಾರಿ ಶಾಲೆ ಉಳಿವಿಗೆ ಗ್ರಾಮಸ್ಥರು ಸ್ವಂತ ಖರ್ಚಿನಲ್ಲಿ ಕಟ್ಟಡ ನಿರ್ಮಿಸಿರುವ ಕಾರ್ಯ ಎಲ್ಲರೂ ಮೆಚ್ಚುವಂತಹದ್ದು ಎಂದರು.

ದಾನಿಗಳಾದ ಕೆ.ಆರ್.ಕೆಂಪೇಗೌಡ, ಕೆ.ಬಿ.ಮಂಜುನಾಥ, ಅನಿತಾ ಸಿದ್ದೇಗೌಡ, ಕೆ.ಎಂ.ಮುರಳೀಧರ, ಕೆ.ಹನುಮಂತರಾಜು, ಉಪತಹಸೀಲ್ದಾರ್ ಬಿ.ಸಿ.ಶಶಿಧರ್, ಹೊನ್ನೇಹಳ್ಳಿ ಗ್ರಾಪಂ ಸದಸ್ಯ ಟಿ.ಉಮೇಶ್, ಪಿಡಿಒ ವಿ.ಪಾರ್ವತಿ, ಪಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಪುಟ್ಟರುದ್ರಾರಾಧ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಾಸುದೇವಮೂರ್ತಿ, ರಾಜಸ್ವ ನಿರೀಕ್ಷಕ ಎಚ್.ಎಂ.ಕುಮಾರಸ್ವಾಮಿ, ಮುಖಂಡ ಬಿ.ಎಂ.ಶ್ರೀನಿವಾಸ್, ನಿವೃತ್ತ ನೌಕರ ಕೆಂಪಣ್ಣ, ಸಿಆರ್‌ಪಿ ವಿ.ರಾಮಕೃಷ್ಣ, ಡಿಆರ್‌ಸಿ ಶಿವಕುಮಾರ್, ಮುಖ್ಯಶಿಕ್ಷಕ ರವಿಕೀರ್ತಿ, ಶಿಕ್ಷಕ ಬಿ.ರಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ ಇದ್ದರು.