ಜಿಲ್ಲೆ

ಶಿಕ್ಷಣ ತಜ್ಞ, ಮಾಜಿ ಎಂಎಲ್ಸಿ ಕೃ.ನರಹರಿ ನಿಧನ

ಬೆಂಗಳೂರು: ಸಂಘ ಪರಿವಾರದ ಹಿರಿಯ ಮುಖಂಡ, ಶಿಕ್ಷಣ ತಜ್ಞ ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯ ಕೃ. ನರಹರಿ (93 ವರ್ಷ) ಬುಧವಾರ ವಿಧಿವಶರಾದರು.

ಕೆಲ ಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಇತ್ತೀಚಿಗಷ್ಟೇ ಚೇತರಿಸಿಕೊಂಡಿದ್ದರು. ಆದರೆ, ವಯೋಸಹಜ ಕಾಯಿಲೆಯಿಂದ ಬುಧವಾರ ಮುಂಜಾನೆ ಇಹಲೋಕ ತ್ಯಜಿಸಿದರು. ಮೃತರು ಸಹೋದರಿ ರುಕ್ಷ್ಮಿಣಿ ಸೇರಿ ಅಪಾರ ಸಂಖ್ಯೆಯ ಬಂಧುಗಳನ್ನು ಅಗಲಿದ್ದಾರೆ.

ಕೃ. ನರಹರಿ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಸಂಘ ಪರಿವಾರದ ವಿವಿಧ ಸಂಘಟನೆಗಳ ಹಿರಿಯ ನಾಯಕರು, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖಂಡರು, ಶಿಕ್ಷಣ ಕ್ಷೇತ್ರದ ಪ್ರಮುಖರು ಮೃತರು ನೆಲೆಸಿದ್ದ ಶ್ರೀರಾಮಪುರದ ‘ಚೈತನ್ಯ’ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು. ನಂತರ ಅಪರಾಹ್ನ 3 ಗಂಟೆಗೆ ಹರಿಶ್ಚಂದ್ರ ಘಾಟ್ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಬಹುಮುಖ ಪ್ರತಿಭೆಯ ನೇತಾರ:

ಮುಲತಃ ಮೈಸೂರಿನವರಾದ ಕೃ. ನರಹರಿ ಅವರು ಬೆಂಗಳೂರಿನಲ್ಲಿ ಆರ್‌ಎಸ್‌ಎಸ್, ಜನಸಂಘ, ಬಿಜೆಪಿ ಸಹಿತ ಸಂಘ ಪರಿವಾರದ ವಿವಿಧ ಸಂಘಟನೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೊನೆಯವರೆಗೂ ಅವಿವಾಹಿತರಾಗಿಯೇ ಉಳಿದಿದ್ದ ಅವರು ಆರ್‌ಎಸ್‌ಎಸ್‌ನ ವಿವಿಧ ವಿಭಾಗಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದರು. ಶಿಕ್ಷಣ ಕ್ಷೇತ್ರ ಅಲ್ಲದೆ ಸಾಂಸ್ಕೃತಿಕ, ಇತಿಹಾಸ, ಸಂಸ್ಕೃತ, ಸಮಾಜ ಸೇವೆ, ರಾಜಕೀಯ ಇತ್ಯಾದಿ ಕ್ಷೇತ್ರಗಳಲ್ಲಿ ಹೆಚ್ಚಿನ ಜ್ಞಾನ ಹೊಂದಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು.

1958ರಲ್ಲಿ ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಪಡೆದ ಬಳಿಕ 24 ವರ್ಷ ಅಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. 1984ರಲ್ಲಿ ಸ್ವಯಂ ನಿವೃತ್ತಿ ಪಡೆದು ಬಿಜೆಪಿಯಿಂದ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದರು. ಸತತ ಮೂರು ಬಾರಿ ಮೇಲ್ಮನೆಗೆ ಆಯ್ಕೆ ಆಗಿದ್ದ ಅವರು ಸದನದಲ್ಲಿ ಶಿಕ್ಷಣ ಕ್ಷೇತ್ರದ ವಿವಿಧ ಸಮಸ್ಯೆಗಳನ್ನು ಮಂಡಿಸಿ ಸರ್ಕಾರದಿಂದ ಪರಿಹಾರ ಪಡೆಯುವಲ್ಲಿ ಕಾರಣರಾಗಿದ್ದರು. ಸರ್ಕಾರದ ವಿವಿಧ ಸಮಿತಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವರದಿಗಳನ್ನು ಸಲ್ಲಿಸುವಲ್ಲಿಯೂ ನೆರವಾಗಿದ್ದರು.

ಹಲವು ಸಂಸ್ಥೆಗಳಿಗೆ ಮಾರ್ಗದರ್ಶಕ:

ಆರ್‌ಎಸ್‌ಎಸ್‌ನಲ್ಲಿ ಪ್ರಾಂತ ಕಾರ್ಯವಾಹ, ಕ್ಷೇತ್ರೀಯ ಕಾರ್ಯವಾಹರಾಗಿ ಕಾರ್ಯನಿರ್ವಹಿಸಿದ್ದ ಕೃ. ನರಹರಿ ಅವರು ರಾಷ್ಟ್ರೀಯ ಶೈಕ್ಷಿಕ ಮಹಾಸಂಘ ಹಾಗೂ ಬೆಂಗಳೂರಿನ ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಭಾರತೀಯ ಶಿಕ್ಷಣ ಮಂಡಳ, ಮಾಧ್ಯಮಿಕ ಶಿಕ್ಷಕ ಸಂಘದಲ್ಲೂ ವಿವಿಧ ಜವಾಬ್ದಾರಿ ನಿರ್ವಹಿಸಿದ್ದರು. ಜತೆಗೆ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ವಿದ್ಯಾಕೇಂದ್ರ ಸಹಿತ ಇತರ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರಮುಖರಿಂದ ಸಂತಾಪ:

ಕೃ ನರಹರಿ ಅವರ ನಿಧನಕ್ಕೆ ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹ ಸರಕಾರ್ಯವಾಹ ಸಿ.ಆರ್. ಮುಕುಂದ, ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ, ದಿ ಮಿಥಿಕ್ ಸೊಸೈಟಿ ಅಧ್ಯಕ್ಷ ವಿ. ನಾಗರಾಜ್ ಸೇರಿ ಇತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಗಣ್ಯರಿಂದ ಅಂತಿಮ ದರ್ಶನ:

ನಗರದ ಶ್ರೀರಾಮಪುರದಲ್ಲಿರುವ ಮೃತರ ನಿವಾಸಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಡಾ. ಸಿ.ಎನ್.ಮಂಜುನಾಥ್, ಜಗ್ಗೇಶ್, ಶಾಸಕರಾದ ಸುರೇಶ್ ಕುಮಾರ್, ಡಾ. ಸಿ.ಎನ್. ಅಶ್ವತ್ಥ್ ನಾರಾಯಣ, ರವಿಸುಬ್ರಹ್ಮಣ್ಯ ಸೇರಿ ಹಲವು ಗಣ್ಯರು ತೆರಳಿ ಅಂತಿಮ ದರ್ಶನ ಪಡೆದರು. ಜತೆಗೆ ಆರ್‌ಎಸ್‌ಎಸ್ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ್ ಗುರುಪ್ರಸಾದ್, ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ಶೈಕ್ಷಿಕ ಮಹಾಸಂಘದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಗುಂಟಾ ಲಕ್ಷ್ಮಣ್ ಅಂತಿಮ ನಮನ ಸಲ್ಲಿಸಿದರು.

ಕೃ.ನರಹರಿ ಅವರ ನಿಧನ ಸುದ್ದಿ ತಿಳಿದು ಖೇದವಾಗಿದೆ. ತಮ್ಮ 93 ವರ್ಷದ ಜೀವನದಲ್ಲಿ ಬಹುಶ: 80 ವರ್ಷಕ್ಕೂ ಹೆಚ್ಚು ಕಾಲ ದೇಶದ ಹಿತಕ್ಕೆ, ಸಾಮಾಜಿಕ ಚಟುವಟಿಕೆಗಳಿಗೆ, ಜೀವನವನ್ನು ಮೀಸಲಿರಿಸಿ ಪ್ರಾಮಾಣಿಕ ಹಾಗೂ ಆದರ್ಶಮಯ ಜೀವನ ನಡೆಸಿದ್ದರು. ಅವರ ಸಹೋದರ, ಸಹೋದರಿ ಕೂಡಾ ದೇಶ ಸೇವೆಗೆ ಇಡೀ ಜೀವನವನ್ನೇ ಮುಡಿಪು ಇಟ್ಟವರು. ಶೈಕ್ಷಣಿಕ ಕ್ಷೇತ್ರದಲ್ಲಿ ಇವರ ಸಾಧನೆ ಅಪ್ರತಿಮ. ಶ್ರೀಕೃಷ್ಣ ಮುಖ್ಯ ಪ್ರಾಣರು ಅವರಿಗೆ ಸದ್ಗತಿ ನೀಡಲಿ.

- ಶ್ರೀ ವಿಶ್ವ ಪ್ರಸನ್ನತೀರ್ಥರು, ಪೇಜಾವರ ಮಠ