ಜಿಲ್ಲೆ

ಆರ್ಥಿಕ ಪ್ರಗತಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ: ಅರ್ಥಶಾಸ್ತ್ರ ತಜ್ಞ ಹಾಸನ ಬಿ.ಜಿ.ಧಮೇಂದ್ರ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದೇಶ ಆರ್ಥಿಕ ಪ್ರಗತಿಯಲ್ಲಿ 4ನೇ ಸ್ಥಾನ ಪಡೆದಿದೆ ಎಂದು ಅರ್ಥಶಾಸ್ತ್ರ ತಜ್ಞ ಹಾಸನ ಬಿ.ಜಿ.ಧಮೇಂದ್ರ ಅಭಿಪ್ರಾಯಪಟ್ಟರು.

ನಗರದ ರೋಟರಿ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ವೇದಿಕೆಯಿಂದ ಆಯೋಜಿಸಿದ್ದ ವಿಚಾರ ಸಂಕಿರಣ, ಶೈಕ್ಷಣಿಕ ಕಾರ್ಯಾಗಾರ, ಪ್ರತಿಭಾ ಪುರಸ್ಕಾರದಲ್ಲಿ ‘ದ್ವಿತೀಯ ಪಿಯುಸಿ ಫಲಿತಾಂಶ ಉತ್ತಮ ಪಡಿಸುವ ತಂತ್ರಗಳು’ ಕುರಿತು ಉಪನ್ಯಾಸ ನೀಡಿದ ಅವರು, ಪ್ರಪಂಚದಲ್ಲಿಯೇ ಭಾರತ ಅತ್ಯಧಿಕ ಮಾನವ ಸಂಪತ್ತು ಹೊಂದಿರುವ ದೇಶ. 10 ವರ್ಷದ ಹಿಂದೆ 14ನೇ ಸ್ಥಾನಲ್ಲಿದದ್ದ ದೇಶದ ಆರ್ಥಿಕ ವ್ಯವಸ್ಥೆ 4ನೇ ಸ್ಥಾನಕ್ಕೆ ಬಂದು ನಿಂತಿರುವುದು ಕಡಿಮೆ ಸಾಧನೆಯಲ್ಲ ಎಂದು ಹೇಳಿದರು.

ಬೇರೆ ರಾಷ್ಟ್ರಗಳ ಕಣ್ಣು ಭಾರತದ ಆರ್ಥಿಕ ವ್ಯವಸ್ಥೆಯ ಮೇಲೆ ಬಿದ್ದಿದೆ. ಅಮೆರಿಕಾ, ಚೀನಾ, ಜಪಾನ್, ರಷ್ಯಾಕ್ಕೆ ಕಣ್ಣುಕುಕ್ಕುವಂತಾಗಿದೆ. ಮುಂದಿನ ದಿನಗಳಲ್ಲಿ ಭಾರತ ವಿಶ್ವಗುರುವಾಗಿ ಮುನ್ನಡೆಯುವಂತಹ ಲಕ್ಷಣಗಳು ಕಾಣಿಸುತ್ತಿವೆ. ಅಷ್ಟೇ ಸವಾಲುಗಳು ಸಮಸ್ಯೆಗಳು ಎದುರಾಗುತ್ತಿವೆ. ಭಾರತದ ಆರ್ಥಿಕ ಬೆಳವಣಿಗೆಯನ್ನು ನಿಯಂತ್ರಣದಲ್ಲಿಸಿಕೊಳ್ಳಲು ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಹುನ್ನಾರ ನಡೆಸುತ್ತಿವೆ. ಈ ನಡುವೆ ಅರ್ಥಶಾಸ್ತ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಇಂತಹ ವಿಷಯಗಳನ್ನು ತಿಳಿದುಕೊಳ್ಳುವುದು ಅತ್ಯಾವಶ್ಯಕ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಡಿಡಿಪಿಯು ಸಿ.ಚಲುವಯ್ಯ ಮಾತನಾಡಿ, ಬದಲಾದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅರ್ಥಶಾಸ್ತ್ರ ವಿಷಯ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗಬಾರದೆಂದು ಶೈಕ್ಷಣಿಕ ಕಾರ್ಯಾಗಾರ ಆಯೋಜಿಸಲಾಗಿದೆ. ಗಣಿತದಷ್ಟೇ ಅರ್ಥಶಾಸ್ತ್ರ ವಿಷಯವು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಬಾರದು, ಸರಳವಾಗಿ ಅರ್ಥವಾಗುವಂತಹ ಕೌಶಲಜ್ಞಾನ ಹೆಚ್ಚಿಸುವುದು, ಆಸಕ್ತಿದಾಯಕವಾಗಿ ಕೇಳುವ ಬೋಧನಾಕ್ರಮ, ಬರವಣಿಗೆ, ಪಠ್ಯವಾರು ವಿಷಯದೊಂದಿಗೆ ಭವಿಷ್ಯ ರೂಪಿಸಿಕೊಳ್ಳುವ ಮೌಲ್ಯಜ್ಞಾನವನ್ನು ಹೆಚ್ಚಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವು 14ನೇ ಸ್ಥಾನಕ್ಕೆ ಬರುವಂತೆ ಶ್ರಮಪಟ್ಟಿದ್ದಾರೆ. ಮುಂದಿನ ಶೈಕ್ಷಣಿಕ ಶಾಲಿನಲ್ಲಿ ಮತ್ತಷ್ಟು ಗುಣಮಟ್ಟದ ಫಲಿತಾಂಶ ದಾಖಲಿಸಲು ಇಂತಹ ಕಾರ್ಯಾಗಾರಗಳು ಅವಶ್ಯಕ ಎಂದರು.

ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತಯ್ಯ, ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಬಿ.ಎಸ್.ಬೋರೇಗೌಡ, ಭೈರೇಶ್, ಬಿ.ಹನುಮಂತು, ಪ್ರಾಂಶುಪಾಲರಾದ ವಿ.ಕೆ.ಆನಂದ್, ಎಂ.ಜಯಶಂಕರ್, ಶಿವರಾಜು, ಸಹದೇವ, ಗಿಡ್ಡೇಗೌಡ, ವೇದಿಕೆಯ ಕಾರ್ಯದರ್ಶಿ ಚಂದ್ರಲಿಂಗು, ಖಚಾಂಚಿ ಶ್ರೀನಿವಾಸ್ ಇತರರಿದ್ದರು. ಇದೇ ಸಂದರ್ಭದಲ್ಲಿ ಅರ್ಥಶಾಸ್ತ ವಿಷಯದಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉಪನ್ಯಾಸಕರಿಗೆ ಅಭಿನಂದನೆ ಸಲ್ಲಿಸಲಾಯಿತು.