ಜಿಲ್ಲೆ

ಸಮಸ್ಯೆ ನಡುವೆಯೇ ಗುಣಮಟ್ಟದ ಶಿಕ್ಷಣ: ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಪ್ರಶಂಸೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಪಿಯು ಶಿಕ್ಷಣ ಇಲಾಖೆಯಲ್ಲಿ ಅನೇಕ ಸಮಸ್ಯೆಗಳಿವೆ. ಆದಾಗ್ಯೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಪ್ರಶಂಸೆ ವ್ಯಕ್ತಪಡಿಸಿದರು.

ನಗರದ ಎಸ್.ಬಿ ಸಮುದಾಯ ಭವನದಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಹಾಗೂ ಉಪನ್ಯಾಸಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಷ್ಟೆಲ್ಲ ಹೋರಾಟಗಳನ್ನು ಮಾಡಿದರೂ ಏಕಕಾಲಕ್ಕೆ ಯಾವುದೇ ಸರ್ಕಾರದಿಂದ ಕೂಡ ನಿರ್ದಿಷ್ಟವಾದ ಪರಿಹಾರ ಕಂಡುಕೊಳ್ಳಲು ಆಗುತ್ತಿಲ್ಲ. ಪ್ರತಿ ಸಮಸ್ಯೆಯ ಸಂದರ್ಭದಲ್ಲಿ ಹೋರಾಟ ನಿರಂತರವಾಗಿ ನಡೆಯುತ್ತದೆ. ಎರಡು ವರ್ಷದಿಂದ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡಬೇಕು ಎಂಬ ಹೋರಾಟವಿದ್ದರೂ ಸರ್ಕಾರ ನಿರ್ಲಕ್ಷೃ ಮಾಡುತ್ತಿದೆ. 27 ವರ್ಷ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದರೂ ಪ್ರಾಂಶುಪಾಲರಾಗಲು ಸಾಧ್ಯವಾಗಿಲ್ಲ. ಕೆಲವರಿಗೆ ಸಿಗುವುದೇ ಇಲ್ಲ. ಸಿಕ್ಕವರಿಗೆ 15, 20, 25 ವರ್ಷದ ಕಾಲಮಿತಿ ಬಡ್ತಿ ಸಕಾಲಕ್ಕೆ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಉಪನ್ಯಾಸಕರು ಬಿಇಡಿ ಪದವಿ ಪಡೆಯಲು ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. 2019-20ರ ಸಾಲಿನ ಉಪನ್ಯಾಸಕರಿಗೆ ಪರಿವೀಕ್ಷಣಾ ಅವಧಿ ಘೋಷಣೆಯಾಗಿಲ.್ಲ ವರ್ಗಾವಣೆ ನೀತಿ ಅವೈಜ್ಞಾನಿಕವಾಗಿದೆ. ಅನುದಾನಿತ ನೌಕರರಿಗೆ ಪಿಂಚಣಿ ಭತ್ಯೆ, ಜ್ಯೋತಿ ಸಂಜೀವಿನಿ ದೊರೆಯುತ್ತಿಲ್ಲ. ಅನುದಾನ ರಹಿತ ನೌಕರರಿಗೆ ಹಂತ ಹಂತವಾಗಿ ವೇತನ ಅನುದಾನ ನೀಡಬೇಕು. ಅಲ್ಲಿಯ ಶಿಕ್ಷಕರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು ಬಹಳ ವಿಳಂಬವಾಗುತ್ತಿದೆ. ಈ ರೀತಿ ವಿಳಂಬ ಮಾಡುವುದರಿಂದ ಬಹಳಷ್ಟು ನೌಕರರಿಗೆ ಅನ್ಯಾಯವಾಗುತ್ತದೆ. ಚುನಾವಣೆಗೆ ಮುನ್ನ 7ನೇ ವೇತನ ಆಯೋಗದ ಶಿಫಾರಸು ಪಡೆದು ಜಾರಿಗೊಳಿಸಬೇಕು. ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಶಿಕ್ಷಕರ ವೈದ್ಯಕೀಯ ವೆಚ್ಚ ಮರುಪಾವತಿ ಬಹಳಷ್ಟು ತಾರತಮ್ಯವಾಗುತ್ತಿದೆ. ಅದರ ಹಂಚಿಕೆಯಲ್ಲಿ ವಿಳಂಬವಾಗುತ್ತಿದೆ. ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ನಿರ್ದಿಷ್ಟ ಸಮಯದಲ್ಲಿ ಅನುದಾನ ನೀಡಬೇಕು. ಶಿಕ್ಷಕರು ವಿದ್ಯಾರ್ಥಿಗಳನ್ನು ಆಕರ್ಷಿಸಿ ಅವರಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಡಿಡಿಪಿಯು ಸಿ.ಚಲುವಯ್ಯ ಪದೋನ್ನತಿ ಪಡೆದ ಉಪನ್ಯಾಸಕರನ್ನು ಅಭಿನಂದಿಸಿದರು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಎ.ಎಚ್.ನಿಂಗೇಗೌಡ, ಪ್ರಾಂಶುಪಾಲ ಯೋಗಣ್ಣ, ಸಂಘದ ಗೌರವಾಧ್ಯಕ್ಷ ಹನುಮಂತಯ್ಯ, ಕಾರ್ಯದರ್ಶಿ ಎಸ್.ಆರ್. ವೆಂಕಟೇಶ್, ಕೋಶಾಧ್ಯಕ್ಷ ಜಯಣ್ಣ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಭೈರೇಶ್, ಎಚ್.ಎನ್.ಶಿವಪ್ಪ, ಗುರುಲಿಂಗೇಗೌಡ, ಚನ್ನಕೃಷ್ಣಯ್ಯ, ಆರ್.ರವೀಂದ್ರ, ಟಿ.ಎಸ್.ಲತಾ ಇತರರಿದ್ದರು.