ಮಂಡ್ಯ: ಸಾಮಾನ್ಯವಾಗಿ ಹಿಂದೆಲ್ಲ ಆರೇಳು ತಿಂಗಳಿಗೆ ಒಂದು ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಪೂರಕ ಪರೀಕ್ಷೆಯ ನೆಪದಲ್ಲಿ ನಿರಂತರವಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಒಟ್ಟಾರೆ ಅವೈಜ್ಞಾನಿಕ ಶಿಕ್ಷಣ ನೀತಿಯಿಂದಾಗಿ ಶಿಕ್ಷಕರು ಮತ್ತು ಮಕ್ಕಳು ಪರಿತಪಿಸುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಎಸ್.ಬಿ ಸಮುದಾಯ ಭವನದಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ, ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ, ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಷ್ಟು ಬಾರಿ ಪೂರಕ ಪರೀಕ್ಷೆಗಳನ್ನು ನಡೆಸಬೇಕು. ಸಿಬ್ಬಂದಿ ಎಷ್ಟು ಬೇಕು?. ಎಷ್ಟು ಸಮಯ ಬೇಕು, ಮೌಲ್ಯಮಾಪನ ಮಾಡುವುದಾದರೆ ಇನ್ನು ತರಗತಿಗಳನ್ನು ನಡೆಸುವುದು ಹೇಗೆ?. ಈ ಬಗ್ಗೆ ಸಂಬಂಧಿಸಿದ ಸಚಿವರನ್ನು ಸದನದಲ್ಲಿ ಪ್ರಶ್ನಿಸಿದರೆ, ಈ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಉತ್ತರ ನೀಡುತ್ತಾರೆ. ಆದರೆ ಡಿಡಿಪಿಐ ಹಾಗೂ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿ ಕೆಲಸ ಮಾಡಿಸುತ್ತಾರೆ. ಇದು ಒಳ್ಳೆಯ ನಡೆಯಲ್ಲ ಎಂದು ಹೇಳಿದರು.
ಪರೀಕ್ಷೆ ನಡೆಸಲು ಪಂಚಾಯತ್‌ರಾಜ್ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು. 400 ರಿಂದ 500 ವಿದ್ಯಾರ್ಥಿಗಳಿರುವಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಬಸ್‌ಗಳ ಕೊರತೆ ಇದೆ. ಸುಮಾರು 2500 ಮಾರ್ಗಗಳಲ್ಲಿ ಸಮಸ್ಯೆಗಳು ಉಲ್ಬಣವಾಗಿದೆ. ಇನ್ನೂ ಒಂದು ಸಾವಿರ ಬಸ್‌ಗಳ ಖರೀದಿಯಾಗಬೇಕು. ಸಾರಿಗೆ ವ್ಯವಸ್ಥೆ ಸರಿಯಾಗದಿದ್ದರೆ ಒಬ್ಬ ವಿದ್ಯಾರ್ಥಿ ಸುಮಾರು 5 ರಿಂದ 8 ಕಿ.ಮೀ ಪರೀಕ್ಷಾ ಕೇಂದ್ರಕ್ಕೆ ಬರುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಪಂಚಾಯತ್‌ರಾಜ್ ಇಲಾಖೆಯಲ್ಲೇ ಸಿಬ್ಬಂದಿ ಕೊರತೆ ಇದೆ. ನಾವು ನಿರ್ವಹಣೆ ಮಾಡಲಾಗದು ಎಂದು ಅವರೇ ಹೇಳುತ್ತಾರೆ. ಆದ್ದರಿಂದ ಸರ್ಕಾರದ ಅವೈಜ್ಞಾನಿಕ ನಿರ್ಧಾರದ ಹಠಮಾರಿತನವನ್ನು ಬಿಡಬೇಕು ಎಂದು ಸಲಹೆ ನೀಡಿದರು.
ಹಳೇ ಪಿಂಚಣಿ ವ್ಯವಸ್ಥೆ ತರಬೇಕು. 7ನೇ ವೇತನ ಆಯೋಗದ ವರದಿಯನ್ನು ಚುನಾವಣೆಗೂ ಮುನ್ನ ತೆಗೆದುಕೊಂಡು ಯಥಾವತ್ತಾಗಿ ಜಾರಿಗೆ ತರಬೇಕು. ಕೆಲವು ಕಡೆ ಕಟ್ಟಡದ ಕೊರತೆ ಇದೆ. ಸ್ಥಳೀಯ ಸಮಸ್ಯೆಗಳನ್ನು ಸರಿಪಡಿಸಬೇಕು. ಗುಣಾತ್ಮಕ ಶಿಕ್ಷಣದ ಕಡೆಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಎಂಎಲ್‌ಸಿ ಕೆ.ಟಿ. ಶ್ರೆಕಂಠೇಗೌಡ ಮಾತನಾಡಿ, ಶಿಕ್ಷಣದಲ್ಲಿ ಸಂಘಟನೆ ಮತ್ತು ಹೋರಾಟ ಎರಡೂ ನಮ್ಮ ಉತ್ತರವಾಗಬೇಕು. ಕರ್ನಾಟಕದ ಶಿಕ್ಷಣ ಜಗತ್ತಿಗೆ ಮಾದರಿಯಾಗಬೇಕು. ಇದಕ್ಕೆ ಶಕ್ತಿ ತುಂಬುವ ಕೆಲಸಬೇಕು. ತಮ್ಮ ಎಲ್ಲ ಅಧಿಕಾರವನ್ನೂ ಅದಕ್ಕಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ಮಾತ್ರ ಮಕ್ಕಳ ಭವಿಷ್ಯ ಮತ್ತು ಬದುಕನ್ನು ಸಮಗ್ರವಾಗಿ ಕಟ್ಟಿಕೊಡಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ಎಸ್‌ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಭೈರೇಶ್, ರಾಜ್ಯ ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ, ಚನ್ನಕೃಷ್ಣಯ್ಯ, ಹನುಮಂತಯ್ಯ ಇತರರಿದ್ದರು.