ಹಳೆಯಂಗಡಿ: ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಸಂದರ್ಭ ಮುಂದಿನ ಗುರಿ ನಿರ್ಧರಿಸಿ ಏಕಾಗ್ರತೆಯಿಂದ ಮುಂದುವರಿಯಲು ತಿಳಿವಳಿಕೆ ಕಾರ್ಯಾಗಾರವು ಬಹಳ ಉಪಯೋಗಿಯಾಗಿದ್ದು ವಿದ್ಯಾರ್ಥಿಗಳ ಜೀವನ ಔನ್ನತ್ಯಕ್ಕೆ ಪೂರಕ ಕಾರ್ಯಾಗಾರ ಅಭಿನಂದನೀಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ.ಸೋಂದಾ ಭಾಸ್ಕರ ಭಟ್ ಹೇಳಿದರು.
ಸಸಿಹಿತ್ಲು ಉತ್ಥಾನ ಬಳಗ ಸೇವಾ ಟ್ರಸ್ಟ್ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ/ಪಿಯುಸಿ ಬಳಿಕ ಮುಂದೇನು? ಎಂಬ ಬಗ್ಗೆ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕಲಿಕೆಯೊಂದಿಗೆ ಸೃಜನಶೀಲತೆ ಬೆರೆಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.
ಬಳಿಕ ವಿವಿಧ ಶಿಕ್ಷಣ ಕ್ಷೇತ್ರಗಳಲ್ಲಿ ಔದ್ಯೋಗಿಕ ಹಾಗೂ ಸಂಶೋಧನಾತ್ಮಕ ಅವಕಾಶಗಳ ಬಗ್ಗೆ ಆಯಾಯ ಶಿಕ್ಷಣ ತಜ್ಞರು ಮಾರ್ಗದರ್ಶನ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸುರತ್ಕಲ್ ಎನ್‌ಐಟಿಕೆ ಕಂಪ್ಯೂಟರ್ ಸೈನ್ಸ್ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಅಣ್ಣಪ್ಪ, ಮಂಗಳೂರು ಮೀನುಗಾರಿಕಾ ವಿಶ್ವವಿದ್ಯಾಲಯದ ಡಾ.ಎಸ್.ಆರ್.ಸೋಮಶೇಖರ್, ಬೈಕಂಪಾಡಿಯ ಗವರ್ನಮೆಂಟ್ ಟೂಲ್ ರೂಮ್ ಮತ್ತು ಟ್ರೈನಿಂಗ್ ಸೆಂಟರ್ ಸಂಸ್ಥೆಯ ಅಧ್ಯಾಪಕ ಯತೀಶ್ ರಾವ್ ಮಾಹಿತಿ ನೀಡಿದರು. ವಿವಿಧ ಶಾಲಾ ಕಾಲೇಜುಗಳ ಸುಮಾರು 62 ವಿದ್ಯಾರ್ಥಿಗಳು ಶೈಕ್ಷಣಿಕ ಶಿಬಿರದಲ್ಲಿ ಪಾಲ್ಗೊಂಡಿದ್ದರು.