ಜಿಲ್ಲೆ

ಪಠ್ಯ ಪುಸ್ತಕ ಬದಲಾವಣೆ ಸಚಿವರಿಗೆ ಯಾಕಷ್ಟು ಆಸಕ್ತಿ ಶೈಕ್ಷಣಿಕ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇ ಗೌಡ ಪ್ರಶ್ನೆ

ಮಂಗಳೂರು: ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಗೆ ಪೂರಕವಾಗಿ ಬೇಕಾದ ಸವಲತ್ತು, ಗುಣಮಟ್ಟದ ಶಿಕ್ಷಣ ಕೊಡಲು ಹೆಚ್ಚಿನ ಗಮನ ನೀಡಬೇಕಾದ ಸಚಿವರು ಪಠ್ಯಪುಸ್ತಕ ಬದಲಾಯಿಸುವ ವಿಚಾರದಲ್ಲಿ ಆಸಕ್ತರಾಗುತ್ತಿದ್ದಾರೆ. ಇದರಿಂದ ಏನೂ ಬದಲಾವಣೆ ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.


ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಮಂಗಳೂರು ಹಾಗೂ ಎಸ್.ಸಿ.ಎಸ್ ಪದವಿ ಪೂರ್ವ ಕಾಲೇಜು ಇವರ ಜಂಟಿ ಸಹಭಾಗಿತ್ವದಲ್ಲಿ ಅಶೋಕ ನಗರದ ಎಸ್.ಸಿ.ಎಸ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ-2023-24ವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಕಾಲೇಜುಗಳ ಉಪನ್ಯಾಸಕರು ನಿವೃತ್ತರಾದಾಗ ಸರಿಯಾದ ಪಿಂಚಣಿ ಇಲ್ಲದೇ ಒದ್ದಾಟ ನಡೆಸುವ ಸ್ಥಿತಿ ಈಗ ನಿರ್ಮಾಣವಾಗುತ್ತಿದೆ. ಬಹಳಷ್ಟು ಕಾಲೇಜುಗಳಲ್ಲಿ ಪ್ರಭಾರ ಪ್ರಾಂಶುಪಾಲರ ಹುದ್ದೆ ಇದ್ದರೂ ಅವರು ಪ್ರಾಂಶುಪಾಲರ ಕೆಲಸವನ್ನೇ ಮಾಡುವುದು. ಆದರೆ ಅವರಿಗೆ ನೀಡುವ ಭತ್ಯೆ, ಸವಲತ್ತುಗಳ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಕಾಲೇಜುಗಳ ಮಾನ್ಯತೆ ವಿಚಾರದಲ್ಲೂ ಗೊಂದಲಗಳಿದ್ದು, ಈ ಕುರಿತು ಸೆ.4ರಂದು ಇಲಾಖಾ ಮಟ್ಟದ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿಕೊಂಡು ಬಗೆಹರಿಸುವ ಕೆಲಸವನ್ನು ಮಾಡುತ್ತೇನೆ ಎಂದರು.


ಪಠ್ಯಪುಸ್ತಕ ರಚನೆ ಸಮಿತಿಗೆ ತಜ್ಞರ ತಂಡವನ್ನು ನೇಮಕ ಮಾಡಿ ಈ ಬಳಿಕ ತಜ್ಞರ ಸಲಹೆ ಮೇರೆಗೆ ಇಂತಹ ಕೆಲಸವಾಗಬೇಕಿತ್ತು. ಶಿಕ್ಷಣದಲ್ಲಿ ಗುಣಮಟ್ಟದ ಹೆಚ್ಚಳವಾಗಬೇಕಾದರೆ ಸರ್ಕಾರಿ, ಅನುದಾನಿತ ಕಾಲೇಜುಗಳಿಗೆ ಬೇಕಾದಷ್ಟು ಉಪನ್ಯಾಸಕರ ನೇಮಕಾತಿ ನಡೆಯಬೇಕು. ಸರ್ಕಾರ ಮಂಜೂರಾತಿ ಕೊಟ್ಟ ಹುದ್ದೆಗಳು ಈಗಲೂ ಖಾಲಿ ಇರುವಾಗ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ನೀಡಲು ಹೇಗೆ ಸಾಧ್ಯ. ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಭೋಜೇಗೌಡ ಹೇಳಿದರು.


ಈ ಸಂದರ್ಭ ದ.ಕ.ಜಿಲ್ಲೆಯ ನಿವೃತ್ತ ಪ್ರಾಂಶುಪಾಲರುಗಳಾದ ಅಹಲ್ಯಾ ಕೆ, ಪ್ರೇಮಲತಾ ಎಂ, ಇಸ್ಮಾಯಿಲ್ ಟಿ, ಯೂಸ್ು ಡಿ, ಗೋಪಾಲಕೃಷ್ಣ ಉಪಾಧ್ಯಾಯ ಹಾಗೂ ಮಧುಕರ್ ಸಾಲಿನ್ಸ್ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ನಿವೃತ್ತರಾದ ವೆಂಕಟೇಶ್‌ಮೂರ್ತಿ ಕೊಕ್ಕಡ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದಲ್ಲಿ 600 ಅಂಕ ಗಳಿಸಿದ ವಿದ್ಯಾರ್ಥಿಯ ಜತೆಯಲ್ಲಿ ಪ್ರತಿ ತಾಲೂಕಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಡಿ. ಜಯಣ್ಣ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ದೇರಳಕಟ್ಟೆಯ ಶಿವಾಸ್ ಕಾಲೇಜು ಅಧ್ಯಕ್ಷ ಡಾ.ಶಿವರಾಮ ಕೆ. ಭಂಡಾರಿ, ಬೆಳ್ತಂಗಡಿ ಗುರುವಾಯನಕೆರೆ ಎಕ್ಸೆಲ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ, ಎಸ್.ಸಿ.ಎಸ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ವಾಹಣಾಕಾರಿ ಯು.ಕೆ.ಖಾಲಿದ್, ಎಸ್.ಸಿ.ಎಸ್ ಪಿಯು ಕಾಲೇಜು ಪ್ರಾಂಶುಪಾಲ ಡಾ.ಶ್ರೀಪತಿ ರಾವ್, ದ.ಕ.ಪಿಯು ಇಲಾಖೆಯ ಅಕಾರಿ ನಿತಿನ್, ಪ್ರಾಚಾರ್ಯ ಸಂಘದ ಕಾರ‌್ಯದರ್ಶಿ ಯೂಸ್ು, ಉಪಾಧ್ಯಕ್ಷರಾದ ಸುಧೀರ್, ವಿಠಲ್, ವಿನಾಯಕ್, ಕೋಶಾಧಿಕಾರಿ ಕವಿತಾ ಮೊದಲಾದವರು ಉಪಸ್ಥಿತರಿದ್ದರು. ಪ್ರಾಚಾರ್ಯ ಸಂಘದ ಅಧ್ಯಕ್ಷ ಗಂಗಾಧರ ಆಳ್ವ ಸ್ವಾಗತಿಸಿದರು. ಕಬ್ಬಿನಾಲೆ ಬಾಲಚಂದ್ರ ಹೆಬ್ಬಾರ್ ಕಾರ‌್ಯಕ್ರಮ ನಿರ್ವಹಿಸಿದರು.