ಜಿಲ್ಲೆ

ಹುಲ್ಲೂರು 546 ಶಿಕ್ಷಕರ ತವರೂರು

ರೋಣ: ತಾಲೂಕು ಕೇಂದ್ರದಿಂದ 10 ಕಿ.ಮೀ ದೂರದಲ್ಲಿರುವ ಪುಟ್ಟ ಗ್ರಾಮ ಹುಲ್ಲೂರು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಗ್ರಾಮದ 546 ಮಂದಿ ಶಿಕ್ಷಕರಾಗಿ ನಾಡಿನೆಲ್ಲೆಡೆ ಸೇವೆ ಸಲ್ಲಿಸುತ್ತಿದ್ದಾರೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಡಿಗೆ ಅಪೂರ್ವ ಕೊಡುಗೆ ನೀಡಿದೆ. ಉತ್ತಮ ಕಲಿಕಾ ವಾತಾವರಣದಿಂದಾಗಿ ಮಕ್ಕಳಲ್ಲಿ ಓದುವ ಹುಮ್ಮಸ್ಸು ಮೂಡುತ್ತಿದೆ. ಇದರ ಪರಿಣಾಮ ಗ್ರಾಮದ ನೂರಾರು ಮಂದಿ ಶಿಕ್ಷಕರಾಗಿ ರೂಪುಗೊಂಡಿದ್ದಾರೆ.

5,000 ಜನಸಂಖ್ಯೆಯ ಹುಲ್ಲೂರು ಕೃಷಿ ಪ್ರಾಧಾನ್ಯವಾದ ಊರು. ಶೈಕ್ಷಣಿಕ ಕ್ರಾಂತಿಗೆ ಮೊದಲಿನಿಂದಲೂ ಹೆಸರುವಾಸಿಯಾಗಿದೆ. ಗುಣಮಟ್ಟದ ಶಿಕ್ಷಣ, ಆಕರ್ಷಕ ಸೌಲಭ್ಯಗಳು ಇಲ್ಲಿನ ಶಾಲೆಯಲ್ಲಿವೆ. ಸುತ್ತಲಿನ ಗ್ರಾಮಗಳ ಮಕ್ಕಳ ಕಲಿಕೆಗೆ ಆಸರೆಯಾಗಿದೆ. 1ರಿಂದ 7ನೇ ತರಗತಿ ವರೆಗೆ 414 ವಿದ್ಯಾರ್ಥಿಗಳಿದ್ದಾರೆ. ಸುಸಜ್ಜಿತವಾದ 13 ಕೊಠಡಿಗಳಿವೆ. 14 ಶಿಕ್ಷಕ ಹುದ್ದೆಗಳಲ್ಲಿ 13 ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯು ಹೂದೋಟದಂತೆ ಕಂಗೊಳಿಸುತ್ತಿದೆ.

ಶಿಕ್ಷಕರ ಗ್ರಾಮ: ಗ್ರಾಮದ ಬಹುತೇಕ ಮನೆಗಳಲ್ಲಿ ಶಿಕ್ಷಕರಿದ್ದಾರೆ. ಕೆಲವು ಮನೆಗಳಲ್ಲಿ 1ರಿಂದ 4 ಜನರು ನಾಡಿನೆಲ್ಲೆಡೆ ಸರ್ಕಾರಿ ಸೇವೆಯಲ್ಲಿರುವುದು ವಿಶೇಷ. ಸುಮಾರು 546 ಶಿಕ್ಷಕರನ್ನು ನಾಡಿಗೆ ನೀಡಿದ ಖ್ಯಾತಿ ಈ ಗ್ರಾಮದ್ದು. ಇಲ್ಲಿ ಹುಟ್ಟಿ ಬೆಳೆದು ಶಿಕ್ಷಕ ವೃತ್ತಿಗಾಗಿ ಬೇರೆ ಬೇರೆ ಕಡೆ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಬಂಧುಗಳು ತಮ್ಮ ಮಕ್ಕಳಿಗೆ ಹುಟ್ಟೂರಿನ ಸರ್ಕಾರಿ ಶಾಲೆ, ಪೌಢಶಾಲೆಗೆ ಬೆಂಬಲವಾಗಿ ನಿಂತಿರುವುದು ಹೆಮ್ಮೆಯ ಸಂಗತಿ.

ಶಾಲೆಯ ವಾತಾವರಣ: ಶಾಲೆಯ ಗೋಡೆ ಬರಹ, ಕಾಂಪೌಂಡ್, ಕಂಬಗಳ ಮೇಲಿನ ಬರವಣಿಗೆಗಳು ವಿದ್ಯಾರ್ಥಿ ವೃಂದದ ಮನಸು ಮುಟ್ಟುವಂತಿವೆ. ಪರಿಸರ ರಕ್ಷಣೆ, ಪರಿಸರ ಮಾಲಿನ್ಯದ ದುಷ್ಪರಿಣಾಮ, ಕುಡಿಯುವ ನೀರಿನ ಸದ್ಬಳಕೆ, ಸಾರಿಗೆ, ವಿಜ್ಞಾನ, ತಂತ್ರಜ್ಞಾನಗಳ ಬೆಳವಣಿಗೆ ಕುರಿತು ಬೆಳಕು ಚೆಲ್ಲುವ ಗೋಡೆ ಬರಹಗಳಿವೆ. ವಿದ್ಯಾರ್ಥಿಗಳು ಪ್ರಯೋಗ ಮಾಡುವುದರಲ್ಲಿ, ಕಂಪ್ಯೂಟರ್ ಬಳಕೆಯಲ್ಲಿ ನಿಸ್ಸೀಮರು ಬಾನುಲಿ, ನಲಿ-ಕಲಿ ಸೇರಿ ಅನೇಕ ಕಾರ್ಯಕ್ರಮಗಳು ಶಿಕ್ಷಣಕ್ಕೆ ಪೂರಕವಾಗಿ ಬಳಕೆಯಾಗುತ್ತಿವೆ. ವರ್ಗ ಕೋಣೆಗಳಲ್ಲಿರುವ ತೈಲವರ್ಣದ ಚಿತ್ರಗಳು ಮಕ್ಕಳ ಮನಸೂರೆಗೊಳಿಸುತ್ತಿವೆ. ಭೂಪಟ, ವ್ಯಾಕರಣಗಳ ಮಾಹಿತಿಗಾಗಿ ವಿದ್ಯಾರ್ಥಿಗಳು ಪುಸ್ತಕ ತೆರೆಯುವುದೇ ಬೇಡ. ನಲಿಕಲಿ ಕೊಠಡಿ ಮಾಹಿತಿ ನೀಡುವ ಮಾಹಿತಿ ಭಂಡಾರವಾಗಿದೆ. ಪ್ರಾಣಿ, ಪಕ್ಷಿಗಳ ಚಿತ್ರವಂತೂ ಮನಸಿಗೆ ಮುದ ನೀಡುವಂತಿವೆ.