ವಿಜಯವಾಣಿ ಸುದ್ದಿಜಾಲ ಉಡುಪಿ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಬೇಕೆಂಬ ಗುರಿ ತಾಳಬೇಕು. ಅದಕ್ಕಾಗಿ ಜೀವನದಲ್ಲಿ ಎದುರಾಗುವ ಸವಾಲು ಎದುರಿಸುತ್ತ ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ಮುಂಬಯಿ ಕಸ್ಟಮ್ಸ್ ವಿಭಾಗದ ಸಹಾಯಕ ಆಯುಕ್ತೆ, ಐಆರ್ಎಸ್ ಅಧಿಕಾರಿ ಮಿಶಲ್ ಕ್ವೀನಿ ಡಿಕೋಸ್ತಾ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಸಂತೆಕಟ್ಟೆಯ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯದ ಯುವ ಆಯೋಗ, ಶಿಕ್ಷಣ ಮಾತ್ತು ಸಾಮಾಜಿಕ ಸಂಪರ್ಕ ಮಾಧ್ಯಮ ಆಯೋಗದ ವತಿಯಿಂದ ಸೆಪ್ಟೆಂಬರ್ 7ರಂದು ಆಯೋಜಿಸಿದ್ದ ಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಕಠಿಣ ಪರಿಶ್ರಮದಿಂದ ಭವಿಷ್ಯ ರೂಪಿಸಿಕೊಳ್ಳಬೇಕಿದೆ. ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವಜನರು ಶೈಕ್ಷಣಿಕವಾಗಿ ಮೊದಲ ಸ್ಥಾನದಲ್ಲಿದ್ದರೂ ಸಹ ಸರ್ಕಾರಿ ಸೇವೆಗಳತ್ತ ಆಸಕ್ತಿ ತೋರುತ್ತಿಲ್ಲ. ಅದು ಕಷ್ಟದ ಕೆಲಸ ಎಂಬ ತಪ್ಪು ಭಾವನೆ ಇದೆ. ಸೂಕ್ತ ಜಾಗೃತಿಯ ಮೂಲಕ ಯುವಸಮುದಾಯಕ್ಕೆ ಪ್ರೋತ್ಸಾಹ ನೀಡಬೇಕಿದೆ ಎಂದರು.
2024ರ ಯುಪಿಎಸ್ಸಿ ಪರೀಕ್ಷೆಯಲ್ಲಿ 372ನೇ ರ್ಯಾಂಕ್ ಗಳಿಸಿದ್ದ ಉಡುಪಿಯ ಶ್ರೇಯಾನ್ಸ್ ಗೋಮ್ಸ್ ಮಾತನಾಡಿ, ಪರೀಕ್ಷೆಗೆ ನಡೆಸಿದ ತಯಾರಿ ಹಾಗೂ ಎದುರಿಸಿದ ಸವಾಲುಗಳ ಕುರಿತು ಮಾಹಿತಿ ಹಂಚಿಕೊಂಡರು.
ಧರ್ಮಪ್ರಾಂತ್ಯದ ಕುಲಪತಿ ವಂ.ಸ್ಟೀವನ್ ಡಿಸೋಜಾ, ಧರ್ಮಗುರುಗಳಾದ ವಂ.ವಿಲ್ಸನ್ ಡಿಸೋಜಾ, ವಂ.ಅಶ್ವಿನ್ ಆರಾನ್ಹಾ ಉಪಸ್ಥಿತರಿದ್ದರು.
ಧರ್ಮಪ್ರಾಂತ್ಯದ ಶಿಕ್ಷಣ ಆಯೋಗದ ನಿರ್ದೇಶಕ ವಂ.ವಿನ್ಸೆಂಟ್ ಕ್ರಾಸ್ತಾ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ ಪರಿಚಯಿಸದರು. ಯುವ ಆಯೋಗದ ನಿರ್ದೇಶಕ ವಂ.ಸ್ಟೀವನ್ ಫೆರ್ನಾಂಡಿಸ್ ಪ್ರಾರ್ಥನಾ ವಿಧಿ ನೆರವೇರಿಸಿದರು. ಲೆಸ್ಲಿ ಆರೋಜಾ ಕಾರ್ಯಕ್ರಮ ನಿರೂಪಿಸಿದರು.
ಕ್ರೈಸ್ತ ಸಮುದಾಯದ ಮಕ್ಕಳು ಸರ್ಕಾರಿ ಸೇವೆಗೆ ಹೋಗುವ ಕುರಿತು ಕನಸು ಕಾಣಬೇಕು. ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಧರ್ಮಪ್ರಾಂತ್ಯದ ವತಿಯಿಂದ ಸದಾ ಸೂಕ್ತ ಮಾರ್ಗದರ್ಶನ ನೀಡಲಾಗುವುದು. | ಡಾ.ಜೆರಾಲ್ಡ್ ಐಸಾಕ್ ಲೋಬೊ. ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ