ಜಿಲ್ಲೆ

'ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಮೌನಕ್ಕೆ ದೂಡಿದ ಶಿಕ್ಷಣ'

ಆರ್.ಕೃಷ್ಣ

ಮೈಸೂರು: ದಲಿತ ಕವಿ, ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ರಚಿತ ದರ್ಗಾ ಮಾಳದ ಚಿತ್ರಗಳು ಕೃತಿಯನ್ನು ಶನಿವಾರ ಬಿಡುಗಡೆ ಮಾಡಲಾಯಿತು.

ಮೈಸೂರು ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಆಕೃತಿ ಪುಸ್ತಕ, ಜಂಗಮ ಕಲೆಕ್ಟಿವ್, ಬೀ ಕಲ್ಚರ್, ಬಿವಿಎಸ್,ಬಯಲು ಬಳಗ, ತಮಟೆ ಮೀಡಿಯಾ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಡಾ.ಸ್ವಾಮಿ ಆನಂದ್ ಪುಸ್ತಕ ಬಿಡುಗಡೆ ಮಾಡಿದರು.

ಪುಸ್ತಕ ಕುರಿತು ಸಮಾಜಶಾಸ್ತ್ರಜ್ಞ ಸಿ.ಜೆ.ಲಕ್ಷ್ಮೀಪತಿ ಮಾತನಾಡಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಮೌನಕ್ಕೆ ದೂಡಿದ್ದು, ಅವರಲ್ಲಿ ಪ್ರಶ್ನೆಗಳು ಸೃಷ್ಟಿಸಲು ಅವಕಾಶವೇ ಇಲ್ಲದಂತೆ ಮಾಡಲಾಗಿದೆ. ಮಕ್ಕಳ ಮಿದುಳಿನಲ್ಲಿ ಅವರಿಗೆ ತಿಳಿಯದಂತೆಯೇ ವಿಷವನ್ನು ಬಿತ್ತಲಾಗುತ್ತಿದ್ದು, ಇಂತಹ ಸೂಕ್ಷ್ಮಗಳನ್ನು ಅರಿಯಲು ದರ್ಗಾ ಮಾಳದ ಚಿತ್ರಗಳು ಕೃತಿ ಸಹಾಯಕವಾಗಿದೆ ಎಂದರು.

1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣ, ಬ್ರಾಹ್ಮಣ್ಯವಾದದ ಹೇರಿಕೆಯ ಕಾಲಘಟ್ಟದಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಅವರು, ಕೋಲಾರದಲ್ಲಿ ಸ್ಥಾಪಿಸಿದ ಆದಿಮ ಸಂಸ್ಥೆಯು ದಲಿತ ಚಳವಳಿಯ ಸಾಂಸ್ಕೃತಿಕ ಚಲನಶೀಲತೆಯನ್ನು ಮುಂದುವರಿಸಿತು. ಪರ್ಯಾಯ ಶಿಕ್ಷಣ ವ್ಯವಸ್ಥೆಗೆ ಪ್ರಯತ್ನಿಸಿತು ಎಂದು ಸ್ಮರಿಸಿದರು.

ದರ್ಗಾ ಮಾಳದ ಚಿತ್ರಗಳು ಪುಸ್ತಕವು ಒಂದು ಕುಲಶಾಸ್ತ್ರೀಯ ಅಧ್ಯಯನವಾಗಿ ಕಾಣುತ್ತದೆ. ಆದಿಮ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆಯುವ ಘಟನೆಗಳನ್ನು ಹೊಸ ದೃಷ್ಟಿಕೋನದೊಂದಿಗೆ ನೀಡುತ್ತದೆ. ಕೃತಿಯಲ್ಲಿನ ಪಾತ್ರಗಳು ಪರಸ್ಪರ ಸಂವಾದದಲ್ಲಿ ತೊಡಗಿ ಪ್ರಶ್ನೆಗಳನ್ನು ಸೃಷ್ಟಿಸುತ್ತವೆ. ನಮ್ಮಲ್ಲಿ ಸಂವೇದನಾಶೀಲತೆಯನ್ನು ಮೂಡಿಸುತ್ತದೆ. ಇಲ್ಲಿ ಕೃತಿಕಾರ ಮತ್ತು ಕೃತಿಯಲ್ಲಿನ ಪಾತ್ರಗಳ ನಡುವೆ ಸಂಬಂಧವಿದೆ. ಸಾಮಾಜಿಕ ಮನಃಶಾಸ್ತ್ರೀಯ ಮಹತ್ವವನ್ನು ಕೃತಿ ಹೊಂದಿದೆ. ಆದಿಮದ ಪ್ರಯೋಗಳು ಈ ನೆಲದ ಪಾಠವಾಗಿ ಮಾಡಬೇಕು. ಉತ್ತಮ ತಾತ್ವಿಕ ಮತ್ತು ಸೈದ್ಧಾಂತಿಕ ಮಹತ್ವದ ವಿಷಯ ಹೊರತರಲು ಆದ್ಯತೆ ನೀಡಬೇಕು ಎಂದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ವಿಜಯಕುಮಾರಿ ಕರಿಕಲ್ ಮಾತನಾಡಿ, ದ್ವೇಷದ ವಾತಾವರಣದಲ್ಲಿ ಪ್ರೀತಿ ಹಂಚುವ ಕೆಲಸ ಹೆಚ್ಚಾಗಬೇಕಿದೆ. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬ ಬೇಕಿದೆ. ದರ್ಗಾ ಮಾಳದ ಚಿತ್ರಗಳು ಕೃತಿ ಕೋಟಿಗಾನಹಳ್ಳಿ ರಾಮಯ್ಯ ಅವರಲ್ಲಿನ ತಾಯ್ತನವನ್ನು ಪರಿಚಯಿಸುತ್ತದೆ ಎಂದು ಮೆಚ್ಚಗೆ ವ್ಯಕ್ತಪಡಿಸಿದರು.

ಕವಿಯತ್ರಿ ಪಿ.ಭಾರತೀದೇವಿ ಮಾತನಾಡಿ, ಕೌಶಲಗಳ ಹೆಸರಿನಲ್ಲಿ ಕುಲ ಕಸುಬನ್ನು ಉತ್ತೇಜಿಸುವ ತಾರತಮ್ಯದ ಶಿಕ್ಷಣ ನೀತಿ ರೂಪಿಸಲಾಗುತ್ತಿದೆ. ಈ ಬಗ್ಗೆ ಅವಲೋಕನ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ರಂಗ ಕಲಾವಿದ ಕೆ.ಪಿ.ಲಕ್ಷ್ಮಣ್, ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಪ್ರಕಾಶಕ ಡಿ.ಎನ್.ಗುರುಪ್ರಸಾದ್ ಮತ್ತಿತರರಿದ್ದರು.

ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಸಮುದಾಯ ಮತ್ತು ಭಾಷೆ ಸಾಯುತ್ತಿರುವ ಹೊತ್ತಿನಲ್ಲಿ ಅವುಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಕನ್ನಡ ಭಾಷೆಯಲ್ಲಿ ಹಲವು ಕನ್ನಡಗಳಿದ್ದು, ಅವುಗಳನ್ನು ಬೆರೆಸುವ ಪ್ರಯೋಗದಲ್ಲಿ ತೊಡಗಿದ್ದೇನೆ. ಮುಂದಿನ ಪೀಳಿಗೆಗೆ ಬಿಡುಗಡೆಯ ಆಯ್ಕೆಗಳು ಬೇಕಾಗುತ್ತದೆ. ಆದಿಮ ಅಂತಹ ಆಯ್ಕೆಗಳನ್ನು ಶೋಧಿಸುವ ಸ್ಥಳ. ಇಲ್ಲಿನ ಲೇಖನಗಳು ಅದೇ ಉದ್ದೇಶವನ್ನು ಹೇಳುತ್ತದೆ.