ಜಿಲ್ಲೆ

ಬದುಕಿನ ಮೌಲ್ಯ ಕಲಿಸದ ಶಿಕ್ಷಣ: ಡಾ.ಎಸ್.ಪಿ.ಯೋಗಣ್ಣ ವಿಷಾಧ

ಮೈಸೂರು: ವಿದ್ಯೆ ಹಣ ಸಂಪಾದನೆಗೇ ಹೊರತು ಮೌಲ್ಯಯುತ ಬದುಕಿನ ಪಾಠ ಕಲಿಸುತ್ತಿಲ್ಲ ಎಂದು ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ವಿಷಾದಿಸಿದರು.

ಅದಮ್ಯ ರಂಗಶಾಲೆಯಿಂದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಬಾಲಂಗೋಚಿ’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಹಾಗೂ ನಿತ್ಯಸಚಿವ ಕೆ.ವಿ.ಶಂಕರಗೌಡ ಸಮಾಜಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಹಿಂದೆ ಜನರಲ್ಲಿ ಮೌಢ್ಯವಿದ್ದು, ಶಿಕ್ಷಣದ ಕೊರತೆ ಇದ್ದಾಗ ಸಮಾಜದಲ್ಲಿ ಮೌಲ್ಯ, ನಂಬಿಕೆ, ವಿಶ್ವಾಸ ಇತ್ತು. ಹೀಗಾಗಿ ಹಿರಿಯರು ಯಾವುದೇ ಕಾಗದ, ಪತ್ರ ಇಲ್ಲದಿದ್ದರೂ ಅರಳಿಮರ, ಬೇವಿನ ಮರದ ಸಾಕ್ಷಿಯಾಗಿ ಒಪ್ಪಂದ ಮಾಡಿಕೊಂಡು ಅದರಂತೆ ನಡೆದುಕೊಳ್ಳುತ್ತಿದ್ದರು ಎಂದು ಹೇಳಿದರು.

ಇಂದು ಅಕ್ಷರವಂತರು ಹೆಚ್ಚಾದಂತೆ ದ್ವೇಷ, ಅಸೂಯೆ ಹೆಚ್ಚಾಗಿದೆ. ಸಮಾಜಕ್ಕೆ ಕಂಟಕಪ್ರಾಯ ವಿದ್ಯಾವಂತರೇ ಎನ್ನುವಂತಾಗಿದೆ. ವಿದ್ಯೆ ಹಣ ಸಂಪಾದನೆ ಹೊರತು ಮೌಲ್ಯಯುತ ಬದುಕಿನ ಪಾಠ ಕಲಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬೇಸಿಗೆ ಶಿಬಿರಗಳ ಮೂಲಕ ಮೌಲ್ಯಯುತ ಶಿಕ್ಷಣ ನೀಡುವ ಪ್ರಯತ್ನ ನಡೆದಿದೆ. ಪರಿಸರ ಹಾಗೂ ಮನುಷ್ಯನಿಗೂ ಎಷ್ಟು ಸಂಬಂಧವಿದೆ ಎಂದು ಅರ್ಥೈಸುತ್ತಿದೆ. ನಾಟ್ಯಕ್ಕೂ, ಆರೋಗ್ಯಕ್ಕೂ ನಂಟಿದೆ. ಮನಸ್ಸಿನ ಕೇಂದ್ರೀಕೃತ ಶಕ್ತಿ ಬರುತ್ತದೆ. ನಟನೆಯಿಂದ ವ್ಯಾಯಾಮ, ಮನಸ್ಸಿಗೆ ಉಲ್ಲಾ ಉಂಟು ಮಾಡುತ್ತಿವೆ. ಮೌಲ್ಯ ಶಿಕ್ಷಣವನ್ನು ಮಕ್ಕಳಿಗೆ ಕಲಿಸಬೇಕು. ಸಕಾರಾತ್ಮಕ ಧೈರ್ಯ, ಪ್ರೀತಿ, ಸಹಕಾರ ಮೇಲುಗೈ ಸಾಧಿಸಬೇಕು. ಮಕ್ಕಳಿಗೆ ಮೌಲ್ಯ ಬಿತ್ತಿ, ಉತ್ತಮ ವ್ಯಕ್ತಿತ್ವ ರೂಪಿಸಬೇಕು ಎಂದರು.

ಶಂಕರಗೌಡ ಅವರು ಪದವೀಧರರಾಗಿದ್ದ ಕಾರಣ ಉನ್ನತ ಹುದ್ದೆಯ ಅವಕಾಶವಿತ್ತು. ಆದರೆ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು 1948ರಲ್ಲಿ ಸಹಕಾರ ಸಂಘಟಿತ ಕ್ರಾಂತಿ ಹುಟ್ಟು ಹಾಕಿದ್ದರು. ಪಿಇಎಸ್ ಕಾಲೇಜು ಮೂಲಕ ಶಿಕ್ಷಣ ಸೇವೆ. ರಂಗಭೂಮಿಯಲ್ಲೂ ಸಾಕಷ್ಟು ಕೆಲಸ ಮಾಡಿದರು. ಕುವೆಂಪು ಸಾಹಿತ್ಯವನ್ನು ಮನೆ ಮನೆಗೆ ತಲುಪಿಸಿದ ಯಶಸ್ಸು ಶಂಕರಗೌಡರು ಹಾಗೂ ದೇಜಗೌ ಅವರದು ಎಂದು ಸ್ಮರಿಸಿದರು.

ಶಿಕ್ಷಣ ಸಚಿವರಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೇರವಾಗಿ ತಲುಪುವಂತೆ ಮಾಡಿದರು. ಮಂಡ್ಯದ ರಾಜಕೀಯ ಕಾಲೆಳೆಯುವ ರಾಜಕಾರಣದ ವಿಷ ವೃತ್ತದಿಂದ ಉನ್ನತ ಹುದ್ದೆಗಳನ್ನು ಏರಲು ಸಾಧ್ಯವಾಗಲಿಲ್ಲ. ಕೇವಲ ನಾಲ್ಕು ವರ್ಷ ಶಿಕ್ಷಣ ಸಚಿವರಾಗಿದ್ದವರು ಇಂದಿಗೂ ನಿತ್ಯ ಸಚಿವರಾಗಿರುವ ರಾಜಕೀಯ ಸಂತ ಎಂದು ಬಣ್ಣಿಸಿದರು.

ಅದಮ್ಯ ರಂಗಶಾಲೆ ಗೌರವ ಕಾರ್ಯದರ್ಶಿ ಸತೀಶ್ ಜವರೇಗೌಡ ಮಾತನಾಡಿ, ಮಕ್ಕಳಲ್ಲಿ ಸಾಮರಸ್ಯ ಭಾವನೆ ಬೆಳೆಸುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ. ಓದಿನಲ್ಲಿ ಬಾಲ್ಯ ಜೀವನ ಕಳೆದುಕೊಳ್ಳುತ್ತಿರುವ ಮಕ್ಕಳಿಗೆ ಸೃಜನಶೀಲ ಚಟುವಟಿಕೆ, ಮೊಬೈಲ್, ಟಿವಿ, ಪಠ್ಯದ ಹೊರತಾಗಿ ಮನೋರಂಜನಾ ಪ್ರಪಂಚ ಪರಿಚಯಿಸುವಲ್ಲಿ ಶಿಬಿರ ಯಶಸ್ವಿಯಾಗಿದೆ ಎಂದರು.

ರಾಜಕೀಯ, ಸಹಕಾರ ಕ್ಷೇತ್ರದಲ್ಲಿ ಅಪಾರ ಸೇವೆ ಮಾಡಿ ಸಾಲಗಾರನಾಗಿಯೇ ಬದುಕು ಮುಗಿಸಿದ ರಾಜಕಾರಣಿ ಶಂಕರಗೌಡ ಅವರ ಹೆಸರಿನಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಪ್ರಶಸ್ತಿ ನೀಡಿ, ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಮಂಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕ ಡಾ.ಎ.ಎನ್.ಪ್ರಕಾಶ್‌ಗೌಡ ವಿವಿಧ ಕ್ಷೇತ್ರದವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಅದಮ್ಯ ಬಳಗದ ಟಿ.ಲೋಕೇಶ್ ಹುಣಸೂರು, ಬಸಪ್ಪ ಸಿ.ಸಾಲುಂಡಿ, ಡಾ.ಬಿ.ಬಸವರಾಜು, ರಶ್ಮಿ ಕೆ.ವಿಶ್ವನಾಥ್, ಸುಪ್ರಿಯಾ ಶಿವಣ್ಣ, ಎನ್.ನವೀನ್‌ಕುಮಾರ್, ಮನೋಜ್ ಅದಮ್ಯ, ಅವ್ವ ಪರಮೇಶ್, ಸಿ.ಎಸ್.ರಾಘವೇಂದ್ರ, ನಾಗೇಶ್ ಕಾವ್ಯಪ್ರಿಯ ಇತರರು ಇದ್ದರು.

ಪ್ರಶಸ್ತಿ ಪುರಸ್ಕೃತರು

ಹಿರಿಯ ಪತ್ರಕರ್ತ ಸಿ.ಕೆ.ಮಹೇಂದ್ರ, ಶ್ರೀರಂಗಪಟ್ಟಣ ಡಿವೈಎಸ್ಪಿ ಶಾಂತಮಲ್ಲಪ್ಪ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಕೆ.ಬಿ.ಲಿಂಗರಾಜು, ರಾಜ್ಯ ಖಜಾನೆ ಇಲಾಖೆ ಹೆಚ್ಚುವರಿ ನಿರ್ದೇಶಕಿ ವಿ.ಭಾಗ್ಯಲಕ್ಷ್ಮೀ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಯುವ ಉದ್ಯಮಿ ಸಂಜಯ್ ಹೆಬ್ಬಾರ್, ಸಿನಿಮಾ ಬರಹಗಾರ ಲೋಕೇಶ್‌ಗೌಡ ಮಂಡ್ಯ ಅವರಿಗೆ ಕೆ.ವಿ.ಶಂಕರಗೌಡ ಸಮಾಜಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೇ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮ್ ಅವರಿಗೆ ಗಾಂಧಿ ಸದ್ಬಾವನಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.