ಜಿಲ್ಲೆ

ವಿದ್ಯಾರ್ಜನೆ ಕಾಟಾಚಾರಕ್ಕೆ ಆಗದಿರಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಕೇವಲ ಕಾಟಾಚಾರಕ್ಕಾಗಿ ಆಗಬಾರದು. ಶಿಕ್ಷಕರು ಹೇಳುವ ವಿಷಯವನ್ನು ಸರಿಯಾಗಿ ಅರ್ಥೈಸಿ ಮನದಟ್ಟು ಮಾಡಿಕೊಳ್ಳಬೇಕು. ತರಗತಿಗಳಲ್ಲಿ ಅಧ್ಯಯನ ಮಾಡಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಸಾಧ್ಯವಿಲ್ಲ. ಶಾಲಾ ಸಮಯ ಹೊರತು ಪಡಿಸಿ ಮನೆಯಲ್ಲೂ ಅಭ್ಯಾಸಕ್ಕೆ ಸಮಯ ನಿಗದಿ ಮಾಡಿಕೊಳ್ಳಬೇಕು ಎಂದು ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ನಗರದ ಜನತಾ ಶಿಕ್ಷಣ ಸಮಿತಿ, ಧಾರವಾಡ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜೆಎಸ್​ಎಸ್​ ಕಾಲೇಜಿನಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿರಂತರ ಹಾಗೂ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ಶಿಕ್ಷಕರು ಮಕ್ಕಳಿಗೆ ಅರ್ಥವಾಗುವ ರೀತಿ ಶಿಕ್ಷಣ ನೀಡಬೇಕು. ಪ್ರತಿ ವಿಷಯಗಳ ಮೇಲೆ ಆಗಾಗ ಪರೀಕ್ಷೆಗಳ ಆಯೋಜನೆ, ಪಾಲಕರ ಸಭೆ ಏರ್ಪಡಿಸಿ ಅವರ ಬಗ್ಗೆ ಪರಿಶೀಲಿಸಬೇಕು ಎಂದರು.

ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್​.ಎಸ್​. ಕೆಳದಿಮಠ ಮಾತನಾಡಿದರು.

ಡಾ. ಸೂರಜ್​ ಜೈನ್​, ಪ್ರದಿಪ ಆಚಾರ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ ಸಿಂದಗಿ, ಉಮೇಶ ಬೊಮ್ಮಕ್ಕನವರ, ಇತರರು ಇದ್ದರು. ಧಾರವಾಡ ಸುತ್ತಮುತ್ತಲಿನ ಶಾಲೆಯ 3000 ವಿದ್ಯಾರ್ಥಿಗಳು ಹಾಜರಾಗಿದ್ದರು.

ಡಾ. ಎಸ್​.ಕೆ. ನಡುವಿನಕೇರಿ ಸ್ವಾಗತಿಸಿದರು. ಮಹಾವೀರ ಉಪಾಧ್ಯೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಹರ ಪಾಟೀಲ ನಿರೂಪಿಸಿದರು.