ಜಿಲ್ಲೆ

ಶಿಕ್ಷಣ ಗ್ಯಾರಂಟಿಗಳ ಪಟ್ಟಿಗೆ ಸೇರಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಸರ್ಕಾರ ಸಮಾನ ಶಾಲಾ ಶಿಕ್ಷಣ ಜಾರಿಗೆ ತರುವ ಮೂಲಕ ಎಲ್ಲರೂ ಸಮಾನರು ಎಂದು ತೋರಿಸಿದರೆ ದೇಶದ ಪ್ರಜಾಪ್ರಭುತ್ವಕ್ಕೆ ನೀಡುವ ನಿಜವಾದ ಗೌರವ. ಇಂತಹ ಗ್ಯಾರಂಟಿಯನ್ನು ಸರ್ಕಾರ ನೀಡಿದರೆ ಅದುವೇ ನಿಜವಾದ ಗ್ಯಾರಂಟಿ. ಹೀಗಾಗಿ ಇನ್ನು ಮುಂದಿನ ದಿನಗಳಲ್ಲಿ ಶಿಕ್ಷಣವನ್ನು ಗ್ಯಾರಂಟಿಗಳ ಪಟ್ಟಿಗೆ ಸೇರಿಸಲು ಒತ್ತಾಯಿಸಬೇಕು ಎಂದು ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಜ್ಯೋತ್ಸವ ನಿಮಿತ್ತ ಏರ್ಪಡಿಸಿದ್ದ ಧರೆಗೆ ದೊಡ್ಡವರು ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಎನ್​ಇಪಿ ಹಾಗೂ ರಾಜ್ಯ ಸರ್ಕಾರದ ಎಸ್​ಇಪಿ ಹೀಗೆ ಸರ್ಕಾರಗಳ ಹೊಸ ನೀತಿಗಳಿಂದ ಶಿಕ್ಷಣ ಕ್ಷೇತ್ರ ಗೊಂದಲ್ಲಿ ಸಿಲುಕಿದಂತಾಗಿದೆ. ಹೀಗಾಗಿ ಸರ್ಕಾರಗಳು ಸಮಾನ ಶಿಕ್ಷಣ ನೀಡುವ ಗ್ಯಾರಂಟಿ ನೀಡುವ ಮೂಲಕ ಮಕ್ಕಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕು ಎಂದರು.

ಸರ್ಕಾರ ಶಾಲೆಗಳಿಗೆ ಮೂಲ ಕಲ್ಪಿಸದೆ ಸ್ಮಾರ್ಟ್​ ಕ್ಲಾಸ್​ಗಳನ್ನು ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಮೊದಲು ಶಾಲೆಗಳಿಗೆ ಅಗತ್ಯ ಸೌಲಭ್ಯ ನೀಡಬೇಕು. ತಂತ್ರಜ್ಞಾನದ ಭರಾಟೆಯಲ್ಲಿ ತತ್ವಜ್ಞಾನ ಮರೆಯುವುದು ವಿಷಾದ. ದೇಶದಲ್ಲಿ ಶೇ. 60ರಷ್ಟು ಮಕ್ಕಳು ತಂತ್ರಜ್ಞಾನ ಅಭ್ಯಾಸ ಮಾಡುತ್ತಾರೆ. ಇದರಿಂದ ಸಾಹಿತ್ಯ ಹಾಗೂ ಮಾನವಿಕ ವಿಜ್ಞಾನ ಅಧ್ಯಯನ ಓದುಗರ ಸಂಖ್ಯೆ ಕ್ಷೀಣಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಡಾ.ಬರಗೂರು ರಾಮಚಂದ್ರಪ್ಪ ಬದುಕು ಕುರಿತು ಡಾ. ವೈ.ಬಿ. ಹಿಮ್ಮಡಿ, ಕೊಡುಗೆ ಕುರಿತು ಡಾ. ದಸ್ತಗಿರಸಾಬ್​ ದಿನ್ನಿ ಮಾತನಾಡಿದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ, ಶಂಕರ ಹಲಗತ್ತಿ, ಶಂಕರ ಕುಂಬಿ, ಎಂ.ಡಿ.ಒಕ್ಕುಂದ, ಇತರರು ಇದ್ದರು.