ಜಿಲ್ಲೆ

ಶಿಕ್ಷಣ, ಸಂವಿಧಾನದಿಂದ ಸುಧಾರಣೆ ಸಾಧ್ಯ : ವಿಧಾನಸಭಾಧ್ಯಕ್ಷ ಯು.ಟಿ.ಖಾದರ್

ಆರ್.ಕೃಷ್ಣ

ಮೈಸೂರು: ಬಡತನದಲ್ಲಿ ಹುಟ್ಟಿದವರು ಬಡತನದಲ್ಲಿಯೇ ಸಾಯಬೇಕಾಗಿಲ್ಲ. ಶಿಕ್ಷಣ, ಸಂವಿಧಾನದ ಮೂಲಕ ಸಾಕಷ್ಟು ಬದಲಾವಣೆ ಕಾಣಲು ಸಾಧ್ಯ ಎಂಬುದನ್ನು ಸಿಎಂ ಸಿದ್ದರಾಮಯ್ಯ ಸಾಧಿಸಿ ತೋರಿಸಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘ, ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಒಕ್ಕೂಟಗಳದಿಂದ ಪತ್ರಕರ್ತರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಸಿಂಧುವಳ್ಳಿ ಸುಧೀರ ಅವರು ಸಿದ್ದರಾಮಯ್ಯ- ರಾಜಕೀಯ ಜೀವನದ ಸಾಧನೆ ಕುರಿತು ಬರೆದಿರುವ ‘ಭಾಗ್ಯವಿಧಾತ ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಹಳ್ಳಿಗಾಡಿನಲ್ಲಿ ಅಂದಿನ ಕಾಲಘಟ್ಟದಲ್ಲಿ ಜನಿಸಿದರೂ ಪ್ರಾಮಾಣಿಕತೆ, ಕಾಳಜಿ, ಬದ್ಧತೆ ಇರಿಸಿಕೊಂಡ ಫಲವಾಗಿ ಉನ್ನತ ಮಟ್ಟಕ್ಕೆ ಏರಬಹುದು ಎಂಬುದಕ್ಕೆ ಸಿದ್ದರಾಮಯ್ಯ ಸಾಕ್ಷಿ. ಬಡವರು ಶಿಕ್ಷಣ, ಸಂವಿಧಾನದ ಮೂಲಕ ಸಾಕಷ್ಟು ಸುಧಾರಣೆ ಕಾಣಲು ಸಾಧ್ಯ ಎಂಬುದನ್ನು ಸಿದ್ದರಾಮಯ್ಯ ಸಾಧಿಸಿ ತೋರಿಸಿದ್ದಾರೆ ಎಂದರು.

ಬಡ ಮಕ್ಕಳಿಗೂ ಪೌಷ್ಟಿಕಾಂಶಯುಕ್ತ ಆಹಾರ ದೊರಕಬೇಕು ಎಂಬ ಉದ್ದೇಶದಿಂದ ಸಿಎಂ ಜಾರಿಗೆ ತಂದ ಕ್ಷೀರಭಾಗ್ಯ ಸೇರಿದಂತೆ ಅನೇಕ ಯೋಜನೆಗಳು ಜನ ಸಾಮಾನ್ಯರ ಸ್ವಾಭಿಮಾನದ ಬದುಕಿಗೆ ಪ್ರೇರಕವಾಗಿವೆ ಎಂದರು.

ಆಹಾರ ಭದ್ರತಾ ಕಾಯ್ದೆ ರಾಷ್ಟ್ರದಲ್ಲಿ ಜಾರಿಗೆ ಬರುವ ಮೊದಲೇ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು ಸಿದ್ದರಾಮಯ್ಯ ಅವರ ಜನಪರ ಕಾಳಜಿಗೆ ಸಾಕ್ಷಿ ಎಂದು ಖಾದರ್ ಬಣ್ಣಿಸಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ವಿವಿ ಹಿರಿಯ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಬಿ.ಜೆ. ವಿಜಯಕುಮಾರ್ ಇತರರು ಇದ್ದರು.