ಜಿಲ್ಲೆ

ಶಿಕ್ಷಣದಿಂದ ಸಮಾಜದ ಅಭ್ಯುದಯ ಸಾಧ್ಯ: ಡಾ.ಈಶ್ವರಾನಂದ ಸ್ವಾಮೀಜಿ ಹೇಳಿಕೆ

ಹರ್ಷ ನ.ಪುರೋಹಿತ

ದಾವಣಗೆರೆ: ಶಿಕ್ಷಣದಿಂದ ಮಾತ್ರ ಕುಟುಂಬದ ಆರ್ಥಿಕ ಅಭಿವೃದ್ಧಿಯ ಜತೆಗೆ ಸಮಾಜದ ಅಭ್ಯುದಯ ಸಾಧ್ಯ ಎಂದು ಯಾದಗಿರಿ ಜಿಲ್ಲೆಯ ಮುದೇನೂರು ಮಹಾಸಂಸ್ಥಾನ ಮಠದ ಡಾ. ಈಶ್ವರಾನಂದ ಸ್ವಾಮೀಜಿ ಹೇಳಿದರು.

ನಗರ ದೇವಾಂಗ ಸಂಘದಿಂದ ಇಲ್ಲಿನ ಕೊಂಡಜ್ಜಿ ರಸ್ತೆಯ ಶ್ರೀ ಲಕ್ಷ್ಮೀವೆಂಕಟೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ 7ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಪಡೆಯದಿದ್ದರೆ ಏನನ್ನೂ ಮಾಡಲಾಗದು. ಶಿಕ್ಷಣದಿಂದ ಯಾವುದೇ ಸಾಧನೆ ಕೈಗೊಳ್ಳಬಹುದು. ವಿದ್ಯಾರ್ಥಿಗಳು ಇದಕ್ಕಾಗಿ ನಿರ್ದಿಷ್ಟ ಗುರಿಯೊಂದಿಗೆ ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಜೀವನದ ಪ್ರಮುಖ ತಿರುವು. ಇವೆರಡರ ನಂತರ ಅನೇಕ ದಾರಿಗಳಿವೆ. ಯಾವ ಮಾರ್ಗದಲ್ಲಿ ಸಾಗಿದರೆ ಉತ್ತಮ ಭವಿಷ್ಯ ನಿರ್ಮಾಣ ಮಾಡಬಹುದು ಎಂಬ ಬಗ್ಗೆ ಮಕ್ಕಳ ಜತೆ ಸೇರಿ ಪಾಲಕರು ಚಿಂತನೆ ನಡೆಸಬೇಕು ಹಾಗೂ ಮಕ್ಕಳ ಆಸಕ್ತಿ ಗುರುತಿಸಬೇಕು ಎಂದರು.

ದೇವಾಂಗ ಸಮಾಜವು ಸರ್ಕಾರದಿಂದ ಪಡೆದಿರುವ ನಿವೇಶನದಲ್ಲಿ ಭವ್ಯ ಸಮುದಾಯ ಭವನ ನಿರ್ಮಿಸಬೇಕು. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕು. ಶಿಕ್ಷಣದ ನಂತರ ಉನ್ನತ ಸ್ಥಾನಮಾನ ಪಡೆದವರು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ಪಾಲಿಕೆ ಸದಸ್ಯ ಬಿ.ಜೆ. ಅಜಯ್ಕುಮಾರ್ ಮಾತನಾಡಿ, ಮಕ್ಕಳ ಉನ್ನತಿ ಹಾಗೂ ಶ್ರೇಯೋಭಿವೃದ್ಧಿಯೇ ಹೆತ್ತವರ ಕನಸಾಗಿರುತ್ತದೆ. ಅದಕ್ಕಾಗಿ ಅವರು ತಮ್ಮ ಜೀವನವನ್ನೇ ತ್ಯಾಗ ಮಾಡುತ್ತಾರೆ. ಕೆಲವೊಮ್ಮೆ ಸರಿದಾರಿಗೆ ತರಲು ಕೋಪಿಸಿಕೊಂಡಾಗ ಯಾರೂ ಬೇಸರಿಸಿಕೊಳ್ಳಬಾರದು ಎಂದು ತಿಳಿಸಿದರು.

ದೇಶದಲ್ಲಿ ಸುಮಾರು 84 ಕೋಟಿ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನೆಮ್ಮದಿಯ ಬದುಕಿಗೆ ಆರೋಗ್ಯ ಮುಖ್ಯ. ಇದಕ್ಕಾಗಿ ಯೋಗ, ಪ್ರಾಣಾಯಾಮ ಮೊದಲಾದ ಚಟುವಟಿಕೆಗಳಲ್ಲಿ ತೊಡಗಬೇಕು. ಇತ್ತೀಚಿನ ದಿನಗಳಲ್ಲಿ ಹಿಂದುಗಳ ಸಂಖ್ಯೆ ಗಣನೀಯ ಕಡಿಮೆಯಾಗುತ್ತಿದ್ದು, ಮಕ್ಕಳಿರಲವ್ವ ಮನೆತುಂಬ ಮಾತು ಮತ್ತೆ ಸಾಕಾರಗೊಳ್ಳಬೇಕಿದೆ ಎಂದರು.

ಕಾಂಗ್ರೆಸ್ ಮುಖಂಡ ಬಿ.ಎಂ. ವಾಗೀಶ್‌ಸ್ವಾಮಿ ಮಾತನಾಡಿ, ಯಾವುದೇ ಸಮಾಜ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಬಲಾಢ್ಯಗೊಂಡಾಗ ಆರ್ಥಿಕ ಸದೃಢತೆ ಹೊಂದಲು ಸಾಧ್ಯ. ದೇವಾಂಗ ಸಮಾಜವು ಸಂಘಟನೆ ಮೂಲಕ ಅಭಿವೃದ್ಧಿ ಪಥದತ್ತ ಮುನ್ನಡೆಯಬೇಕು ಎಂದು ಆಶಿಸಿದರಲ್ಲದೆ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಾಮಾನ್ಯ ಜ್ಞಾನ ಅವಶ್ಯಕ ಎಂದು ಹೇಳಿದರು.

ನಗರ ದೇವಾಂಗ ಸಂಘದ ಅಧ್ಯಕ್ಷ ಎನ್. ಬಾಬು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬಿ. ಅಜ್ಜೇಶಿ, ಜಿಲ್ಲಾ ದೇವಾಂಗ ಸಂಘದ ಗೌರವಾಧ್ಯಕ್ಷ ಡಾ.ಎಸ್. ರಂಗನಾಥ್, ದೇವಾಂಗ ಹಾಸ್ಟೆಲ್ ಅಧ್ಯಕ್ಷ ಎಂ.ಎಚ್. ಕೃಷ್ಣಮೂರ್ತಿ, ಡಾ.ಎಂ.ಡಿ. ಚೇತನ್, ಬಿ.ಆರ್. ಶೈಲಜಾ ರಮೇಶ್, ಎಸ್.ಜಿ. ಪುನೀತ್ ಶಂಕರ್, ಉದ್ಯಮಿ ಅತಿಥ್ ಅಂಬರ್‌ಕರ್ ಇತರರು ಇದ್ದರು.