ಬಸವಕಲ್ಯಾಣ: ಸಮಯ ಮತ್ತು ಸೌಲಭ್ಯಗಳನ್ನು ಸಮರ್ಪಕ ಬಳಸಿ ಶ್ರಮವಹಿಸಿ ಅಭ್ಯಾಸ ಮಾಡಿದಾಗ ಜೀವನದಲ್ಲಿ ಮಹತ್ತರ ಸಾಧನೆ ಮಾಡಲು ಸಾಧ್ಯ ಎಂದು ಸಿಪಿಐ ರಘುವೀರಸಿಂಗ್ ಠಾಕೂರ್ ಹೇಳಿದರು.
ನಗರದ ಅಲ್ಲಮಪ್ರಭು ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಶೈಕ್ಷಣಿಕ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವನದಲ್ಲಿ ಸಾಧಿಸುವ ಗುರಿ ಸ್ಪಷ್ಟವಾಗಿರಬೇಕು. ಇದಕ್ಕೆ ಪೂರಕ ಪರಿಶ್ರಮ ಇರಬೇಕು. ಕಲಿಯುವ ವಿಷಯದಲ್ಲಿ ಶ್ರದ್ಧೆ ಮುಖ್ಯ ಎಂದರು.
ವಿದ್ಯಾರ್ಥಿಗಳು ಓದಿನೊಂದಿಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಸುತ್ತಲಿನ ಆಗು-ಹೋಗುಗಳನ್ನು ತಿಳಿದುಕೊಳ್ಳಲು ಪತ್ರಿಕೆಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಆತ್ಮಸ್ಥೆರ್ಯ ಇರಲಿ ಎಂದು ಸಲಹೆ ನೀಡಿದರು.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಅಕ್ಕಣ್ಣ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಮೌಲ್ಯ, ಸಮಾಜಪರ ಚಿಂತನೆ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರನ್ನು ಗೌರವಿಸುವ ಪ್ರವೃತ್ತಿ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಚಾರ್ಯ ಚಂದ್ರಕಾಂತ ಅಕ್ಕಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಧನಾತ್ಮಕ ಚಿಂತನೆಯ ವ್ಯಕ್ತಿಗಳ ಮಾತುಗಳು ಪ್ರೇರಣೆ ನೀಡುತ್ತವೆ. ಉತ್ತಮ ಹವ್ಯಾಸ ರೂಢಿಸಿಕೊಂಡು ಸಮಯ ಪಾಲಿಸಿದಾಗ ಗುರಿ ಸಾಧಿಸಲು ಸಾಧ್ಯ. ಯಾರು ಜೀವನವನ್ನು ಪ್ರೀತಿಸುತ್ತಾರೋ ಅವರು ಸಮಯಕ್ಕೆ ಮಹತ್ವ ನೀಡುತ್ತಾರೆ ಎಂದರು.
ಅನುಭವ ಮಂಟಪ ಟ್ರಸ್ಟ್ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ, ಶಿಕ್ಷಣ ಸಂಯೋಜಕ ಶಿವರಾಜ ಕನಕಟ್ಟೆ, ಉದ್ಯಮಿ ಬಾಲಾಜಿ ಖಂಡಾಳೆ ಮಾತನಾಡಿದರು. ಉಪನ್ಯಾಸಕರಾದ ಶ್ರೀನಿವಾಸ ಶಿಂಧೆ, ಆನಂದ ಚಾಕೂರೆ, ಇರ್ಫಾನ್ ಶೇಖ್, ಶಶಿಧರ ಪಾಟೀಲ್, ಸಂಜು ಪಾಟೀಲ್, ಸಿದ್ದಾರೆಡ್ಡಿ, ತ್ರಿಲೋಚನ ಪಂಚಾಳ, ಗೀತಾ ಮಲಶೆಟ್ಟೆ, ಸಂಗೀತಾ ಅಕ್ಕಣ್ಣ, ಸುಷ್ಮಾ ವಾತಡೆ, ಸಾರಿಕಾ ಜೋಶಿ, ಜನಾಬಾಯಿ, ಕಾವೇರಿ ಶೀಲವಂತ, ಸಂತೋಷ ಇತರರಿದ್ದರು. ಶಾಂತಮ್ಮ ಸ್ವಾಗತಿಸಿದರು. ಸಂದೀಪ ವಂದಿಸಿದರು. ಕು.ನೀಲಾಂಬಿಕಾ ಪತಂಗೆ ಹಾಗೂ ರಾಧಿಕಾ ನಿರೂಪಣೆ ಮಾಡಿದರು.