ಬೆಂಗಳೂರು: ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರ, ಕನ್ನಡದ ಭವಿಷ್ಯವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಶಿಕ್ಷಣ ನೀತಿ ರೂಪಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಹೇಳಿದರು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮೈಕೊ ಕನ್ನಡ ಬಳಗ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರೈತ ಹೋರಾಟಗಾರ್ತಿ ಬಿ. ಅನುಸೂಯಮ್ಮ ಅವರಿಗೆ ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಈ ಪ್ರಶಸ್ತಿಯು ೧೦ ಸಾವಿರ ರೂ.ನಗದು ಒಳಗೊಂಡಿದೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಜಾರಿ ಮಾಡಿದ್ದರಿಂದ ನಾಲ್ಕು ವರ್ಷದ ಪದವಿ ಜಾರಿಯಲ್ಲಿದೆ. ಈಗ ರಾಜ್ಯ ಸರ್ಕಾರವು ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಿ, ಈ ಮೊದಲು ಇದ್ದಂತೆ ಮೂರು ವರ್ಷಗಳ ಪದವಿ ಜಾರಿ ಮಾಡಲು ಮುಂದಾಗಿದೆ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗುವ ಸಾಧ್ಯತೆಯಿದೆ. ಮಕ್ಕಳಿಗೆ ಸಮಸ್ಯೆಯಾಗದಂತೆ ಕ್ರಮವಹಿಸಿ, ಶಿಕ್ಷಣ ನೀತಿಯನ್ನು ಜಾರಿ ಮಾಡಬೇಕು. ಎಸ್‌ಇಪಿಗೆ ಸಂಬಂಧಿಸಿದಂತೆ ವಿವಿಧ ಕನ್ನಡ ಪರ ಸಂಘಸಂಸ್ಥೆಗಳ ಪ್ರತಿನಿಧಿಗಳು, ಭಾಷಾ ಹಾಗೂ ಶಿಕ್ಷಣ ತಜ್ಞರ ಜತೆಗೆ ಚರ್ಚಿಸಿ, ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಅನುದಾನಕ್ಕೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರದ ಮುಂದೆ ಕೈಚಾಚುವಂತೆ ಆಗಬಾರದು. ಸರ್ಕಾರವೇ ಸ್ವಯಂ ಪ್ರೇರಿತವಾಗಿ ಅನುದಾನ ಕೊಡಬೇಕು ಎಂದರು.
ಪ್ರಶಸ್ತಿ ಪುರಸ್ಕೃತೆ ಅನುಸೂಯಮ್ಮ ಅವರು ೧೯೭೦ರ ದಶಕದಲ್ಲಿ ಸ್ಥಳೀಯವಾಗಿ ನಡೆಸಿದ ಗೇಣಿದಾರರ ಹೋರಾಟ, ನಂತರ ನಡೆದ ರೈತ ಚಳವಳಿಯ ಬಗ್ಗೆ ಮಾತನಾಡಿದರು.