ಜಿಲ್ಲೆ

ಗುಣಮಟ್ಟದ ಶಿಕ್ಷಣದಿಂದ ಸರ್ಕಾರಿ ಶಾಲೆಯ ಉನ್ನತಿ

Udupi

ಪಡುಬಿದ್ರಿ: ಸರ್ಕಾರಿ ಶಾಲೆಗಳಲ್ಲಿ ಪರಿಣತ ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣ ನೀಡಿದಲ್ಲಿ ಖಾಸಗಿ ಶಾಲೆಗಳನ್ನು ಮೀರಿ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ದಾಖಲಾಗಲಿದ್ದಾರೆ ಎಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಸರ್ಕಾರಕ್ಕೆ ಸಲಹೆ ನೀಡಿದರು.

ಅದಮಾರು ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಯ ಕಿಶೋರ ಪ್ರಿಯ ಕಟ್ಟಡದಲ್ಲಿನ ಪೂರ್ವ ಪ್ರಾಥಮಿಕದ ಚಿತ್ರ ವಿನ್ಯಾಸ ಕೊಠಡಿಗಳನ್ನು, ಪ್ರಾಂಶುಪಾಲರ ಹಾಗೂ ಸಿಬ್ಬಂದಿ ಕಚೇರಿಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶಿಸ್ತು, ಗುಣಮಟ್ಟದ ಶಿಕ್ಷಣ ಸಮಾಜ ಹಾಗೂ ಶಿಕ್ಷಣ ವ್ಯವಸ್ಥೆಗೆ ದಾರಿದೀಪ. ಕರೊನಾ ನಿಯಂತ್ರಣದೊಂದಿಗೆ ಬದುಕು ಕಟ್ಟಿಕೊಳ್ಳುವ ಸಂದಿಗ್ಧತೆ ನಮ್ಮೆಲ್ಲರಿಗೆ ಬಂದಿದೆ. ಆರೋಗ್ಯ ಹಾಗೂ ಆರ್ಥಿಕತೆ ಸಮತೋಲನ ಮಾಡಬೇಕಾದ ಅನಿವಾರ್ಯತೆ ಸರ್ಕಾರದ ಮುಂದಿದೆ. ಸ್ವತಂತ್ರ ನಿರ್ಧಾರಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗಿಂತ ಉತ್ತಮ ಫಲಿತಾಂಶ ಬರಲು ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಅದಮಾರು ಪೂರ್ಣ ಪ್ರಜ್ಞ ಕಾಲೇಜಿನ ಉಪ ಪ್ರಾಂಶುಪಾಲೆ ಡಾ.ಒಲಿವಿಟಾ ಡಿಸೋಜ, ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮುಖ್ಯಸ್ಥೆ ಲಕ್ಷ್ಮಿ ಉಡುಪ, ಕನ್ನಡ ವಿಭಾಗ ಮುಖ್ಯಶಿಕ್ಷಕ ಶ್ರೀಕಾಂತ ರಾವ್, ಆಡಳಿತ ಮಂಡಳಿ ಕೋಶಾಧಿಕಾರಿ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ಸಂಸ್ಥೆ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸ್ವಾಗತಿಸಿ, ಪ್ರಾಂಶುಪಾಲ ಎಂ.ರಾಮಕೃಷ್ಣ ಪೈ ವಂದಿಸಿದರು. ಉಪನ್ಯಾಸಕ ಡಾ.ಜಯಶೇಖರ ಕಂಗಣ್ಣಾರು ನಿರೂಪಿಸಿದರು.

ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಐ.ಎ.ಎಸ್, ವಿಜ್ಞಾನದಲ್ಲಿ ದೇಶಕ್ಕೆ ನೋಬಲ್ ಗೌರವ ಹಾಗೂ ಕ್ರೀಡೆಯಲ್ಲಿ ಒಲಿಂಪಿಕ್‌ನಲ್ಲಿ ಚಿನ್ನದ ಸಾಧನೆ ಮಾಡಬೇಕೆಂದು ಗುರುಗಳಾದ ವಿಭುದೇಶರು ಆಶಯ ಹೊಂದಿದ್ದರು. ಪ್ರಧಾನಿ ಮೋದಿಯಂತೆ ದೇಶಭಕ್ತನಾಗಿ ರಾಷ್ಟ್ರ ಮುನ್ನಡೆಸುವ ವ್ಯಕ್ತಿಯೊಬ್ಬ ಪೂರ್ಣಪ್ರಜ್ಞ ಸಂಸ್ಥೆಗಳಿಂದ ಹೊರಬರಬೇಕು ಎಂಬುದು ನಮ್ಮ ಪ್ರತಿಜ್ಞೆಯಾಗಿದೆ. ಸುಸಜ್ಜಿತವಾಗಿ ರೂಪಿತವಾಗಿರುವ ಅದಮಾರು ಪೂರ್ಣ ಪ್ರಜ್ಞ ಸಂಸ್ಥೆಗೆ ಮಕ್ಕಳು ಹಾಗೂ ಶಾಲಾ ವಾತಾವರಣಕ್ಕೆ ಧಕ್ಕೆಯಾಗದಂತೆ ಸಾರ್ವಜನಿಕ ಭೇಟಿಗೆ ಆಡಳಿತ ಮಂಡಳಿ ಅವಕಾಶ ನೀಡಬೇಕು. ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅದಮಾರು ಮಠಾಧೀಶ