ಜಿಲ್ಲೆ

ಲೌಕಿಕ ಜ್ಞಾನದ ಶಿಕ್ಷಣ ಅಗತ್ಯ

ತುಮಕೂರು ಡೆಸ್ಕ್

ತುಮಕೂರಿನಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್​ ಅನಿಸಿಕೆ

ವಿಜಯವಾಣಿ ಸುದ್ದಿಜಾಲ ತುಮಕೂರು
ಮಾನವೀಯತೆ, ಸಹೋದರತೆ, ಪರಸ್ಪರ ಪ್ರೀತಿಯಿಂದ ಸತ್ಪ್ರಜೆಯಾಗಿ ಬದುಕುವುದನ್ನು ಕಲಿಸುವ ಕಾಲೇಜುಗಳು ಸಮಾಜದಲ್ಲಿಲ್ಲ. ಹಾಗಾಗಿ, ಇಂದಿಗೆ ಸಾಂಪ್ರದಾಯಿಕ ಶಿಕ್ಷಣದ ಜತೆಗೆ ಧಾರ್ಮಿಕ ಮತ್ತು ಲೌಕಿಕ ಜ್ಞಾನದ ಶಿಕ್ಷಣವೂ ಅಗತ್ಯವಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್​ ಹೇಳಿದರು.


ನಗರದಲ್ಲಿ ಸ್ಟೂಡೆಂಟ್​ ಇಸ್ಲಾಮಿಕ್​ ಆರ್ಗೈನೇಜೇಷನ್​ ಆಫ್​ ಇಂಡಿಯಾ (ಎಸ್​ಐಒ) ವತಿಯಿಂದ ಮಂಗಳವಾರ ಆಯೋಜಿಸಿದ್ದ 18ನೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನುಅಭಿನಂದಿಸಿ ಮಾತನಾಡಿ, ಡಾಕ್ಟರ್​, ಇಂಜಿನಿಯರ್​, ಸೈಂಟಿಸ್ಟ್​, ಲಾಯರ್​ಗಳನ್ನು ಸೃಷ್ಟಿಸುವ ಕಾಲೇಜುಗಳು ಜಗತ್ತಿನಾದ್ಯಂತ ಇವೆ. ಮಾನವತವಾದ ಕಲಿಸುವ ಕಾಲೇಜುಗಳು ನಮ್ಮಲ್ಲಿಲ್ಲ. ಶಿಕ್ಷಣವೆಂದರೆ ಬದುಕಿನ ಎಲ್ಲ ಸಮಸ್ಯೆಗಳನ್ನು ಎದುರಿಸಿ, ಎಲ್ಲರಲ್ಲಿಯೂ ಸಂತೋಷವನ್ನು ಉದ್ದೀಪನಗೊಳಿಸುವುದೇ ಆಗಿದೆ. ಈ ನಿಟ್ಟಿನಲ್ಲಿ ಎಸ್​ಐಒ ಕೆಲಸ ಶ್ಲಾಘನೀಯ ಎಂದರು.


ಸಮಸ್ಯೆ ಸೃಷ್ಟಿಸುವವನು ನಿಜವಾದ ನಾಯಕನಲ್ಲ. ಸಮಸ್ಯೆಯ ಮೂಲ ತಿಳಿದು ಅದನ್ನು ಹೋಗಲಾಡಿಸುವವನೇ ನಿಜವಾದ ನಾಯಕ. ಸಮಾಜವನ್ನು ಒಡೆಯುವವರ ಸಂಖ್ಯೆಯೇ ಹೆಚ್ಚಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಎಸ್​ಐಒ ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ. ಭವಿಷ್ಯದ ಪ್ರಜೆಗಳಾದ ಮಕ್ಕಳ ಮುಂದಿರುವ ಗುರಿಗಳೇನು, ಅವುಗಳನ್ನು ತಲುಪಲು ಇರುವ ದಾರಿಗಳೇನು ಎಂಬುದನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದೆ. ಇದು ವಿದ್ಯಾರ್ಥಿಯ ಕನಸು ಈಡೇರುವುದರ ಜತೆಗೆ, ಆತ ಸತಜೆಯಾಗಿ ಸಹ ರೂಪಗೊಳ್ಳಲು ಸಾಧ್ಯವಾಗುತ್ತದೆ ಎಂದು ಆಶಿಸಿದರು.


ಎಸ್ಸೆಸ್ಸೆಲ್ಸಿ, ದ್ವೀತಿಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಪುರಸ್ಕರಿಸಲಾಯಿತು. ಹಿರೇಮಠಾಧ್ಯಕ್ಷ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಎಸ್​ಐಒ ರಾಜ್ಯ ಕಾರ್ಯದರ್ಶಿ ಮಹಮದ್​ ನಾಸೀರ್​, ಮಾಜಿ ಶಾಸಕರಾದ ಎಸ್​.ಷಫೀ ಅಹ್ಮದ್​, ಎಸ್​.ರಫೀಕ್​ ಅಹ್ಮದ್​, ಮುಖಂಡರಾದ ಇಕ್ಬಾಲ್​ ಅಹ್ಮದ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಶಾಹೀನ್​ ಗ್ರೂಫ್​ ಅಫ್​ ಎಜುಕೇಷನ್​ನ ಅಧ್ಯಕ್ಷ ಡಾ.ಅಬ್ದುಲ್​ ಖದೀರ್​, ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ ಶಬ್ಬೀರ್​ ಅಹಮದ್​, ಪ್ರೊ.ಅಸಾದುಲ್ಲಾ ಖಾನ್​, ತಾಜುದ್ದೀನ್​ ಷರೀಫ್​, ಅಬ್ದುಲ್​ ಜಬ್ಬರ ಸಾಬ್​, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲ ಗುರುಮೂರ್ತಿ, ಎಸ್​ಐಒ ಜಿಲ್ಲಾಧ್ಯಕ್ಷ ಖಲೀಲ್​ ಉಪಸ್ಥಿತರಿದ್ದರು.

ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿದ್ದರೆ ಆತ ದೇಶದ್ರೋಹಿ: ಇಡೀ ವಿಶ್ವದಲ್ಲಿಯೇ ಭಾರತದ ಸಂವಿಧಾನಕ್ಕೆ ಮಹತ್ವವಿದೆ. ಬಡವ-ಬಲ್ಲಿದ ಎಲ್ಲರೂ ಸಹ ಇದರಡಿ ರಕ್ಷಣೆ ಪಡೆಯಬಹುದು. ಯಾವುದೇ ವ್ಯಕ್ತಿ ಮಾತಾನಾಡುವ ಮಾತು ಮತ್ತು ಮಾಡುವ ಕೆಲಸ ದೇಶದ ಅಭಿವೃದ್ಧಿಗೆ ಪೂರಕವಾಗಿದ್ದರೆ ಆತ ದೇಶಪ್ರೇಮಿ. ದೇಶ ಅಭಿವೃದ್ಧಿಗೆ ಮಾರಕವಾಗಿದ್ದರೆ ಆತ ದೇಶದ್ರೋಹಿ. ವಿದ್ಯಾವಂತರೇ ಇಂತಹ ಸಮಸ್ಯೆ ಸೃಷ್ಟಿ ಮಾಡುತ್ತಿದ್ದು, ಹೆಚ್ಚು ಹೆಚ್ಚು ವಿದ್ಯಾವಂತರೇ ಕೋಮುವಾದಿ, ಭ್ರಷ್ಟಾಚಾರಿ, ಭಯೋತ್ಪಾದಕರಾಗಿ ಬದಲಾಗುತ್ತಿದ್ದಾರೆ. ಹಾಗಾಗಿ ಶಿಕ್ಷಣದ ಜತೆಗೆ, ವ್ಯಕ್ತಿತ್ವ ರೂಪಿಸುವ ಕೆಲಸವು ಆಗಬೇಕಾಗಿದೆ ಎಂದು ಖಾದರ್​ ಹೇಳಿದರು.

ವಿದ್ಯಾರ್ಥಿಗಳು, ಯುವಜನರು ಈ ದೇಶದ ಭವಿಷ್ಯ. ಪಾಲಕರು, ಗುರು ಮತ್ತು ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನೆಡೆಯಿರಿ. ತಾಳ್ಮೆಯ ಜತೆಗೆ, ದೃಢ ಸಂಕಲ್ಪವಿದ್ದರೆ ಯಶಸ್ಸು ತಾನಾಗಿಯೇ ದೊರೆಯುತ್ತದೆ. ಸಮಾಜದಲ್ಲಿ ಶಾಂತಿ ವಾತಾವರಣ ನಿರ್ಮಿಸಲು ಕೈಜೋಡಿಸಿದರೆ ಅಭಿವೃದ್ಧಿಯನ್ನು ನಿಮ್ಮ ಕಾಲ ಬುಡಕ್ಕೆ ತರುತ್ತೇವೆ.| ಯು.ಟಿ.ಖಾದರ್​ ವಿಧಾನಸಭಾಧ್ಯಕ್ಷ