ಶಿವಮೊಗ್ಗ: ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನನ್ನನ್ನು ದಡ್ಡ ಎಂದಿದ್ದರು. ಒಬ್ಬ ದಡ್ಡನಿಗೆ ಮಹತ್ವದ ಶಿಕ್ಷಣ ಖಾತೆ ಕೊಡಲಾಗಿದೆ ಎಂದು ಟೀಕಿಸಿದ್ದರು. ಆದರೆ ಕಳೆದೆರಡು ವರ್ಷದಲ್ಲಿ ಇಲಾಖೆಯಲ್ಲಿ ತಂದ ಸುಧಾರಣೆಗಳು ತೃಪ್ತಿದಾಯಕವಾಗಿದ್ದು, ಎಲ್ಲ ಟೀಕೆಗಳಿಗೂ ಮಕ್ಕಳೇ ಫಲಿತಾಂಶದ ಮೂಲಕ ಉತ್ತರ ಕೊಟ್ಟಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಜೆಪಿಗರಿಗೆ ತಿರುಗೇಟು ನೀಡಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಗೆ ಮೂರು ಪರೀಕ್ಷೆಗಳಿಗೆ ಅವಕಾಶ ನೀಡಿದೆ. ಆಗಲೂ ಟೀಕೆಗಳನ್ನು ಮಾಡಿದರು. ಬಡವರ ಮಕ್ಕಳಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಯಾವುದೇ ಶುಲ್ಕವಿಲ್ಲದೆ ಮೂರು ಪರೀಕ್ಷೆಗಳಿಗೆ ಅವಕಾಶ ಕೊಟ್ಟೆ. ಪರೀಕ್ಷೆಗಳನ್ನು ಬರೆದು ಸಾವಿರಾರು ವಿದ್ಯಾರ್ಥಿಗಳು ಫಲಿತಾಂಶವನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರೆ. ಯಾರು ಏನೇ ಅಂದರೂ, ನನ್ನ ವಿರುದ್ಧ ಟೀಕೆ, ಟಿಪ್ಪಣಿಗಳನ್ನು ಮಾಡಿದರೂ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೇ ಇಲಾಖೆಯಲ್ಲಿ ನಾನೇನು ಮಾಡಬೇಕು ಅಂದುಕೊಂಡಿದ್ದೇನೋ ಅದನ್ನೇ ಮಾಡಿ ತೋರಿಸಿದ್ದೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅದಕ್ಕೆ ಈ ಬಾರಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿನ ಫಲಿತಾಂಶವೇ ಸಾಕ್ಷಿಯಾಗಿದೆ. ಯಾವುದೇ ಕೃಪಾಂಕವಿಲ್ಲದೆ, ವೆಬ್‌ಕಾಸ್ಟಿಂಗ್ ಮೂಲಕ ಸುಸಜ್ಜಿತವಾಗಿ ಪರೀಕ್ಷೆಗಳನ್ನು ನಡೆಸಲಾಗಿದೆ. ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆಯ ಕ್ರೋಢೀಕೃತ ಫಲಿತಾಂಶ ಶೇ.79.81 ಹಾಗೂ ಹೊಸಬರ ಫಲಿತಾಂಶ ಶೇ.85.19ರಷ್ಟು ದೊರೆತಿದೆ. ಪಿಯುಸಿ ಮೂರನೇ ಪರೀಕ್ಷೆಗೆ 1,11,002 ವಿದ್ಯಾರ್ಥಿಗಳು ಹಾಜರಾಗಿದ್ದು, 22,446 ಅಂದರೆ ಶೇ.20.22ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು.
ಹಾಜರಾತಿ ಮತ್ತು ಉತ್ತೀರ್ಣದ ಸಂಖ್ಯೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯ ಏರಿಕೆಯಾಗಿದೆ. ಅಂಕ ಸುಧಾರಣೆಗೆ 17,398 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು 11,937 ವಿದ್ಯಾರ್ಥಿಗಳು ತಮ್ಮ ಅಂಕ ಹೆಚ್ಚಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟಾರೆ ಫಲಿತಾಂಶ ಶೇ.85.19ರಷ್ಟಾಗಿದೆ. ವಿಶೇಷವಾಗಿ ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ ವಿಷಯಗಳಲ್ಲಿ ಅಂಕ ಸುಧಾರಣೆಗೆ ಹೆಚ್ಚಿನ ವಿದ್ಯಾರ್ಥಿಗಳು ಒತ್ತು ನೀಡಿದ್ದು, ವಿದ್ಯಾರ್ಥಿಗಳಿಗೆ ಸಿಇಟಿ ಕೌನ್ಸೆಲಿಂಗ್ ಅಥವಾ ಉನ್ನತ ಶಿಕ್ಷಣಕ್ಕೆ ಉತ್ತಮ ಅವಕಾಶ ಸಿಕ್ಕಂತಾಗಿದೆ ಎಂದು ಮಧು ಬಂಗಾರಪ್ಪ ಸಂತಸ ವ್ಯಕ್ತಪಡಿಸಿದರು.