ಉಡುಪಿಯ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಆಯೋಜಿಸಿದ್ದ ವಿಪ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು. ಅಶೋಕ್​ಕುಮಾರ್​ ಕೊಡವೂರು, ಮಂಜುನಾಥ ಭಂಡಾರಿ, ಎಂ.ಎ. ಗೂರ್​, ಮಮತಾ ಗಟ್ಟಿ, ಕೆ.ಜಯಪ್ರಕಾಶ್​ ಹೆಗ್ಡೆ, ಆಯನೂರು ಮಂಜುನಾಥ, ಕೆ.ಕೆ. ಮಂಜುನಾಥ ಇತರರಿದ್ದರು. 
ಜಿಲ್ಲೆ

ರಾಜ್ಯಾದ್ಯಂತ ಶಾಲೆ ಆರಂಭಕ್ಕೆ ಸಕಲ ಸಿದ್ಧತೆ

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ | ಸಕಾಲಕ್ಕೆ ಪುಸ್ತಕ, ಸಮವಸ್ತ್ರ ವಿತರಣೆ

  • ಈ ವರ್ಷ 500 ಕರ್ನಾಟಕ ಪಬ್ಲಿಕ್​ ಸ್ಕೂಲ್​
  • ಮುಂದಿನ 3 ವರ್ಷದಲ್ಲಿ 3 ಸಾವಿರ ಕೆಪಿಎಸ್

ವಿಜಯವಾಣಿ ಸುದ್ದಿಜಾಲ ಉಡುಪಿ
ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯಾದ್ಯಂತ ಎಲ್ಲ ಸರ್ಕಾರಿ ಶಾಲೆ ಆರಂಭಕ್ಕೆ ಸಕಲ ಸಿದ್ಧತೆ ನಡೆದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಸೋಮವಾರ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣಾ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲ ಶಾಲೆಗಳಿಗೂ ಸಕಾಲಕ್ಕೆ ಪುಸ್ತಕ, ಸಮವಸ್ತ್ರ ವಿತರಿಸಲಾಗುವುದು ಎಂದರು.

ಪ್ರಸಕ್ತ ವರ್ಷ 500 ಕೆಪಿಎಸ್​

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಜ್ಯದಲ್ಲಿ 500 ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿ, ಕರ್ನಾಟಕ ಪಬ್ಲಿಕ್​ ಸ್ಕೂಲ್​ (ಕೆಪಿಎಸ್​) ಆಗಿ ಪರಿವರ್ತಿಸಲಾಗುತ್ತಿದೆ. ಇದಕ್ಕಾಗಿ ಸಿಎಸ್​ಆರ್ ​ಫಂಡ್ ಸಂಗ್ರಹಿಸಲಾಗುತ್ತಿದ್ದು, ಅದರ ಜವಾಬ್ದಾರಿಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ನಿಭಾಯಿಸಲಿದ್ದಾರೆ. ಮುಂದಿನ 3 ವರ್ಷದಲ್ಲಿ ರಾಜ್ಯದಲ್ಲಿ ಮತ್ತೆ 3 ಸಾವಿರ ಕೆಪಿಎಸ್​ ಶಾಲೆಗಳನ್ನು ಆರಂಭಿಸಲಾಗುವುದು ಎಂದರು.

ಶೇ.20 ಕೃಪಾಂಕ ಇಲ್ಲ

ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೇ.20 ಕೃಪಾಂಕ ನೀಡಲಾಗಿತ್ತು. ಇದು ಈ ವರ್ಷಕ್ಕಷ್ಟೇ ಸೀಮಿತವಾಗಿದೆ. ಮುಂದೆ ನಡೆಯಲಿರುವ ಎಸ್​ಎಸ್​ಎಲ್​ಸಿ ವಾರ್ಷಿಕ ಪರೀಕ್ಷೆ-2 ಹಾಗೂ ಎಸ್​ಎಸ್​ಎಲ್​ಸಿ ವಾರ್ಷಿಕ ಪರೀಕ್ಷೆ-3 ಇವುಗಳಿಗೆ ಶೇ.20 ಕೃಪಾಂಕ ಇರುವುದಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅಶೋಕ್​ಕುಮಾರ್​ ಕೊಡವೂರು, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಕೆಪಿಸಿಸಿ ಉಪಾಧ್ಯಕ್ಷ ಎಂ.ಎ. ಗಫೂರ್​, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯೆ ಮಮತಾ ಗಟ್ಟಿ, ಎಂಪಿ ಅಭ್ಯರ್ಥಿ ಕೆ.ಜಯಪ್ರಕಾಶ್​ ಹೆಗ್ಡೆ, ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್​ ಹೆಗ್ಡೆ ಕೆ., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪಿ.ಎಂ. ಶಾಹಿದ್, ಪಿ.ಎಂ. ಮಹಮದ್, ವೆರೋನಿಕಾ ಕರ್ನೆಲಿಯೋ, ಆಯನೂರು ಮಂಜುನಾಥ, ಕೆ.ಕೆ. ಮಂಜುನಾಥ, ಪ್ರಸಾದ್​ರಾಜ್​ ಕಾಂಚನ್​, ರಮೇಶ್​ ಕಾಂಚನ್​, ಭಾಸ್ಕರ್​ ರಾವ್​ ಕಿದಿಯೂರು ಇತರರಿದ್ದರು.

ಕಾಂಗ್ರೆಸ್​ ಅಭ್ಯರ್ಥಿಗಳಿಗೇ 'ಗ್ಯಾರಂಟಿ' ಗೆಲುವು

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್​ ಅವರು ವಿಧಾನ ಪರಿಷತ್​ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಪಕ್ಷದ ಶಾಸಕ-ಸಚಿವರಿಗೆ ಹಾಗೂ ಬೂತ್​ ಮಟ್ಟದವರೆಗಿನ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ನೈರುತ್ಯ ಶಿಕ್ಷಣ ಹಾಗೂ ಪದವೀಧರ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳಿಗೇ 'ಗ್ಯಾರಂಟಿ' ಗೆಲುವಾಗಲಿದೆ. ಕಳೆದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆ ಈಡೇರಿಸಿದ್ದೇವೆ. ಈ ಎಂಎಲ್​ಸಿ ಚುನಾವಣೆಯಲ್ಲಿ ನೀಡಿರುವ ಎಲ್ಲ ಭರವಸೆಯನ್ನೂ ಈಡೇರಿಸಲಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​ ಹೆಚ್ಚು ಸ್ಥಾನ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಉಡುಪಿ&ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೆ.ಜಯಪ್ರಕಾಶ್​ ಹೆಗ್ಡೆ ಹಾಗೂ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್​ ಗೆಲುವು ಸಾಧಿಸಲಿದ್ದಾರೆ. ಇದೇ ಅಭಿಪ್ರಾಯದ ರಿಪೋರ್ಟ್​ ನಮಗೆ ಲಭಿಸಿದೆ. ಮಧು ಬಂಗಾರಪ್ಪ. ಶಿಕ್ಷಣ ಸಚಿವ