ಗಂಗಾವತಿ; ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಠಮಾನ್ಯಗಳ ಕೊಡುಗೆ ಅಪಾರ. ಮಠಗಳು ಅಕ್ಷರ ಮತ್ತು ಅನ್ನ ಪರಿಕಲ್ಪನೆಯಡಿಯಲ್ಲಿ ಸೇವೆ ಸಲ್ಲಿಸುತ್ತಿವೆ ಎಂದು ಸಂಸದ ಕೆ. ರಾಜಶೇಖರ ಹಿಟ್ನಾಳ ಹೇಳಿದರು.
ನಗರದ ಪಂಪಾನಗರದಲ್ಲಿರುವ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ಸಂಸದರ ನಿಧಿಯ ಅಡಿಯಲ್ಲಿ ಸ್ಥಾಪಿಸಲಾದ ಹೈಮಾಸ್ಟ್ ಲೈಟ್‌ಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ವೀರಶೈವ ಲಿಂಗಾಯತ ಮಠಗಳು ಅನ್ನ, ಆಶ್ರಯ ಮತ್ತು ಅಕ್ಷರದ ತ್ರಿವಿಧ ದಾಸೋಹ ಸೂತ್ರವನ್ನು ಅಳವಡಿಸಿಕೊಂಡು ಜನಸಾಮಾನ್ಯರಿಗೂ ಶಿಕ್ಷಣ ಒದಗಿಸುತ್ತಿವೆ. ಗುಣಮಟ್ಟದ ಶಿಕ್ಷಣ ಜತೆ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿರುವ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಸೇವೆ ಪ್ರಶಂಸನೀಯ ಎಂದರು.
ಕಲ್ಮಠದ ಡಾ. ಕೊಟ್ಟೂರು ಸ್ವಾಮೀಜಿ ಮಾತನಾಡಿ, ಬಡ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಗಿದೆ. ನರ್ಸರಿಯಿಂದ ಸ್ನಾತಕೋತ್ತರದವರೆಗೆ ಶಿಕ್ಷಣ ಕೇಂದ್ರಗಳಿವೆ ಎಂದರು. ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ ಪ್ರಾಸ್ತಾವಿಕ ಮಾತನಾಡಿದರು. ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ, ಮಾಜಿ ಅಧ್ಯಕ್ಷ ಕೆ. ವೆಂಕಟೇಶ, ಸಂಘದ ಕಾರ್ಯದರ್ಶಿ ಶರಣೇಗೌಡ ಮಾ. ಪಾಟೀಲ್, ಮುಖಂಡರಾದ ಸತೀಶ ಭೋಜಶೆಟ್ಟರ್, ಜೋಗದ ರವಿನಾಯಕ, ವಿಷ್ಣುತೀರ್ಥ ಆದಾಪುರ ಸೇರಿದಂತೆ ಇತರರು ಜತೆಗಿದ್ದರು.