ಜಿಲ್ಲೆ

ಡಿಸಿಸಿ ಬ್ಯಾಂಕ್‌ನಿಂದ ವಿದ್ಯಾಭ್ಯಾಸ ಸಾಲ ಯೋಜನೆ ಜಾರಿ

ಆದರ್ಶ್. ಎಂ.ಕೆ.

ಮಡಿಕೇರಿ: ಡಿಸಿಸಿ ಬ್ಯಾಂಕ್ ವಿದ್ಯಾಭ್ಯಾಸ ಸಾಲದ ಯೋಜನೆ ಜಾರಿಯಾಗಿದ್ದು, ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕೊಡಗು ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಸಾಲ ಸಾಮಾನ್ಯವಾಗಿ ವಾಣಿಜ್ಯ ಬ್ಯಾಂಕುಗಳಲ್ಲಿ ಮಾತ್ರ ಪಡೆಯಲು ಅವಕಾಶವಿದೆ. ಆದರೆ, ಜಿಲ್ಲೆಯ ರೈತರು ಮತ್ತು ಬ್ಯಾಂಕಿನ ಹಾಲಿ ಗ್ರಾಹಕರ ಮಕ್ಕಳು ದೇಶ ಮತ್ತು ವಿದೇಶದಲ್ಲಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡಲು ವಿದ್ಯಾಭ್ಯಾಸ ಸಾಲ ಪಡೆಯಲು ವಂಚಿತರಾಗಿರುವುದನ್ನು ಪರಿಗಣಿಸಿ ರೈತರ ಮಕ್ಕಳಿಗೆ ಅನುಕೂಲವಾಗುವಂತೆ ಅವಶ್ಯವಿರುವ ವಿದ್ಯಾ ಸಹಕಾರ ವೆಂಬ ವಿದ್ಯಾಭ್ಯಾಸ ಸಾಲದ ಯೋಜನೆಂ ಬ್ಯಾಂಕಿನಲ್ಲಿ ಪ್ರಪ್ರಥಮವಾಗಿ ಜಾರಿಗೊಳಿಸಲಾಗಿದೆ. ವೈಯಕ್ತಿಕ ಗರಿಷ್ಠ ರೂ.೬೦ ಲಕ್ಷ ವರೆಗೆ ಸಾಲ ನೀಡಲಾಗುತ್ತಿದ್ದು, ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.


೨೦೨೩-೨೪ನೇ ಸಾಲಿನಲ್ಲಿ ಒಟ್ಟು ವ್ಯವಹಾರ ರೂ.೨೯೨೬.೦೭ ಕೋಟಿ ದಾಖಲಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ ರೂ ೫೨೪.೯೭ ಏರಿಕೆಯನ್ನು ಕಂಡಿದೆ ಎಂದು ತಿಳಿಸಿದ ಅವರು, ರೈತ ಸದಸ್ಯರ ಬೆಳೆ ಸಾಲದ ಬೇಡಿಕೆಯನ್ನು ಪೂರೈಸಲು ಅನುಕೂಲವಾಗುವಂತೆ ಬ್ಯಾಂಕು ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ತಹಲ್‌ವರೆಗೆ ರೂ.೧೦೦೬.೯೪ ಕೋಟಿ ಮೊತ್ತದ ಎನ್.ಸಿ.ಎಲ್. ಮಂಜೂರಾತಿ ಮಾಡಿ ಈಗಾಗಲೇ ರೂ ೭೩೦.೩೬ ಕೋಟಿ ಅರ್ಹ ರೈತ ಸದಸ್ಯರಿಗೆ ಸಾಲ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


ಜಿಲ್ಲೆಯ ಸದಸ್ಯ ಸಹಕಾರ ಸಂಘಗಳಿಗೆ ಹಾಗೂ ಇತರ ಖಾಸಗಿ ಸಂಘ/ ಸಂಸ್ಥೆಗಳಿಗೆ ಅನುಕೂಲವಾಗುವಂತೆ ನಿವೇಶನ/ ಕಟ್ಟಡ ಖರೀದಿಗಾಗಿ ೨೦೨೪-೨೫ ನೇ ಸಾಲಿನಿಂದ ಹೊಸ ಸಾಲ ಯೋಜನೆ ರೂಪಿಸಲಾಗಿದೆ. ಹಾಲಿ ನೀಡುತ್ತಿರುವ ಸೋಲರ್ ಅಳವಡಿಕೆಗೆ ಇರುವ ಸಾಲದ ಮಿತಿಯನ್ನು ರೂ ೬೦ ಲಕ್ಷ ಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.