ಬೆಂಗಳೂರು: ಕನಸು ನನಸು ಮಾಡಿಕೊಳ್ಳುವುದಕ್ಕೆ ವಿದ್ಯೆ ಬಹಳ ಮುಖ್ಯ. ವಿದ್ಯಾವಂತರಾದರೆ ಮಾತ್ರ ಕೆಲಸದಲ್ಲಿ ಹೆಚ್ಚಿನ ಮನ್ನಣೆ ಸಿಗಲಿದೆ ಎಂದು ಚಿತ್ರನಟಿ ಅನು ಪ್ರಭಾಕರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರಾಜಾಜಿನಗರದ ಎಎಸ್ಸಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ "ಸಂಭವ- 2025 ಸಮಾರೋಪ ಕಾರ್ಯಕ್ರಮದದಲ್ಲಿ ಮಾತನಾಡಿದರು. ಕಾಲೇಜು ಓದುತ್ತಿದ್ದ ಸಮಯದಲ್ಲಿ ನನಗೆ ಚಿತ್ರರಂಗದಲ್ಲಿ ಅವಕಾಶ ಬಂದಿದ್ದರಿಂದ ಅರ್ಧಕ್ಕೆ ಅಧ್ಯಯನ ನಿಲ್ಲಿಸಲಾಗಿತ್ತು. ಚಲನಚಿತ್ರ ಕ್ಷೇತ್ರದಲ್ಲಿ 2 ಬಾರಿ ರಾಜ್ಯ ಪ್ರಶಸ್ತಿ ಸಿಕ್ಕಿದರೂ ಹೆಚ್ಚು ಅಧ್ಯಯನ ಮಾಡುವುದಕ್ಕೆ ಆಗಲಿಲ್ಲ ಎಂಬ ಕೊರಗು ಇತ್ತು. ಹಾಗಾಗಿ, ಅಧ್ಯಯನ ಮುಂದುವರಿಸಿ ಸ್ನಾತಕೋತ್ತರ ಪದವಿ ಪಡೆದುಕೊಂಡೆ ಎಂದರು.
ಜೀವನದಲ್ಲಿ ಏರಿಳಿತಗಳು ಸಹಜ.ಆದರೆ ಅಧ್ಯಯನ ಇದ್ದರೆ ಎಂತಹ ಸಮಸ್ಯೆಯನ್ನೂ ಧೃತಿಗೆಡದೆ ಎದುರಿಸಬಹುದು. ಸಿನಿಮಾದ ನಾಯಕ, ನಾಯಕಿಯರನ್ನು ಮೆಚ್ಚಿಕೊಂಡರಷ್ಟೇ ಸಾಲದು ಪಾಲಕರಿಗೆ, ವಿದ್ಯೆ ಕಲಿಸಿದ ಶಿಕ್ಷಕರಿಗೆ ಗೌರವ ಕೊಡುವುದನ್ನು ಮರೆಯಬಾರದು ಎಂದು ನಟಿ ಸಲಹೆ ನೀಡಿದರು. ಎಎಸ್ಸಿ ಶೈಕ್ಷಣಿಕ ಖಜಾಂಚಿ ಸಚಿನ್ ಭಾರದ್ವಾಜ್, ಜಂಟಿ ಕಾರ್ಯದರ್ಶಿ ಸರ್ವೇಶ್ಕುಮಾರ್, ಕಾಲೇಜಿನ ಪ್ರಾಚಾರ್ಯ ಡಾ. ರಾಮಕೃಷ್ಣ ಮುರಳಿ ಮತ್ತಿತರರಿದ್ದರು. 2 ದಿನ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿಯ ಅಧೀನದಲ್ಲಿರುವ 60ಕ್ಕೂ ಅಧಿಕ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು.