ಜಿಲ್ಲೆ

ಮಕ್ಕಳ ಉತ್ತಮ ಭವಿಷ್ಯಕ್ಕೆ ಶಿಕ್ಷಣವೇ ಅಸ್ತ್ರ

ಕೋಲಾರ ಡೆಸ್ಕ್

ಶ್ರೀನಿವಾಸಪುರ: ವಿದ್ಯಾಭ್ಯಾಸವು ಮಕ್ಕಳ ಭವಿಷ್ಯ ರೂಪಿಸುವ ಶಕ್ತಿಶಾಲಿ ಅಸ್ತ್ರವಾಗಿದೆ. ನಾಳೆಯ ಸಮಾಜ ಕಟ್ಟುವ ಪ್ರಜ್ಞಾವಂತ ನಾಗರಿಕರು ಇಂದು ಶಿಕ್ಷಣ ಪಡೆಯುತ್ತಿರುವ ಮಕ್ಕಳೇ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮೈಲಾರಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಮೌಲಾನಾ ಆಜಾದ್​ ಆಂಗ್ಲ ಮಾಧ್ಯಮ ಮಾದರಿ ಶಾಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ದಾಖಲಾತಿ ಆಂದೋಲನ ಹಾಗೂ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಂಗ್ಲ ಮಾಧ್ಯಮದ ಉಚಿತ ಶಿಕ್ಷಣ ನೀಡುವ ಮಾದರಿ ಸರ್ಕಾರಿ ಶಾಲೆಯಾಗಿದ್ದು, ರಾಜ್ಯ ಸರ್ಕಾರದಿಂದ ಪಠ್ಯಪುಸ್ತಕ, ಉಚಿತ ಮಧ್ಯಾಹ್ನ ಊಟ, ಸಮವಸ್ತ್ರ, ಲೇಖನಿ ಸಾಮಗ್ರಿ, ನೋಟ್​ಬುಕ್​ಗಳು ಸೇರಿ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರೀ-ಮ್ಯಾಟ್ರಿಕ್​, ಪೋಸ್ಟ್​ ಮ್ಯಾಟ್ರಿಕ್​ ವಿದ್ಯಾರ್ಥಿವೇತನ, ಮೆರಿಟ್​ ಕಮ್​ ಸ್ಕಾಲರ್​ ಶಿಪ್​, ವಿದ್ಯಾಶ್ರೀ ಯೋಜನೆಗಳ ಜತೆಗೆ ಸಾಮೂಹಿಕ ಮದುವೆ ಯೋಜನೆ ಅಡಿಯಲ್ಲಿ ಪ್ರತಿ ಜೋಡಿಗೆ 50,000 ರೂ., ಸಹಾಯಧನ ನೀಡಲಾಗುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ ಅವರ ಭವಿಷ್ಯ ಭದ್ರಗೊಳಿಸಬೇಕು ಎಂದರು.

ಕೆಎಂಡಿಸಿ ಜಿಲ್ಲಾ ವ್ಯವಸ್ಥಾಪಕಿ ಸೀರಿನ್​ ತಾಜ್​ ಮಾತನಾಡಿ, ಕೆಎಂಡಿಸಿಯಿಂದ ನೀಡಲಾಗುತ್ತಿರುವ ಅರಿವು ಶಿಕ್ಷಣ ಸಾಲ, ಶ್ರಮಶಕ್ತಿ, ಸ್ವಾವಲಂಬಿ ಸಾರಥಿ, ಸಮುದಾಯ ಆಧಾರಿತ ತರಬೇತಿ, ವಿದೇಶಿ ಶಿಕ್ಷಣ ಸಾಲ, ಸ್ವಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಹೆಣ್ಣುಮಕ್ಕಳ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ ಅವರು, ವಿದ್ಯಾವಂತ ಮಹಿಳೆಯೊಬ್ಬಳೇ ಕುಟುಂಬದ ಬೆನ್ನೆಲುಬಾಗುತ್ತಾಳೆ. ಮಕ್ಕಳು ಮೊಬೈಲ್​ನಿಂದ ದೂರವಿದ್ದು, ಪಾಠಗಳಲ್ಲಿ ಗಮನಹರಿಸಿ ಶಿಸ್ತು, ನೈತಿಕತೆ ಹಾಗೂ ಗುರಿಯೊಂದಿಗೆ ಮುಂದೆ ಸಾಗಬೇಕು ಎಂದರು.

ಜಾಮಿಯಾ ಮಸೀದಿ ಅಧ್ಯಕ್ಷ ಜಾಹಿದ್​ ಅನ್ಸಾರಿ, ಎಪಿಜೆ ಅಬ್ದುಲ್​ ಕಲಾಂ ವೆಲ್ಫೇರ್​ ಟ್ರಸ್ಟ್​ ಅಧ್ಯಕ್ಷ ಅಬ್ದುಲ್​ ಮಜೀದ್​, ಪುರಸಭೆ ಸದಸ್ಯ ಸರ್ದಾರ್​, ಪ್ರಧಾನ ಮಂತ್ರಿಯ 15 ಅಂಶಗಳ ಜಿಲ್ಲಾ ಸಮಿತಿ ಸದಸ್ಯ ಶಬ್ಬೀರ್​ ಅಹ್ಮದ್​, ಉರ್ದು ಸಿಆರ್​ಪಿ ನಾಸಿಮಾ ಬೇಗಮ್​, ಮಾಜ ಸೇವಕ ಜಾವಿದ್​, ಕೆಎಂಡಿಸಿ ಸಿಬ್ಬಂದಿ ಸಲೀಂ, ಮುಬಾರಕ್​ ಪಾಷಾ, ಇಮ್ರಾನ್​ ಖಾನ್​, ಉರ್ದು ಇಸಿಒ ಮೊಹಮ್ಮದ್​ ಸಾಧಿಕ್​, ಸಿಆರ್​ಪಿ ಆರಿಫ್​ ಪಾಷಾ ಇದ್ದರು.