ಕಿಕ್ಕೇರಿ : ಭವಿಷ್ಯದ ಮಕ್ಕಳಿಗೆ ಪ್ರತಿಭೆ ಗುರ್ತಿಸಿ ನೀಡುವ ಪುರಸ್ಕಾರದ ಆರ್ಥಿಕ ಸಹಾಯ ದೊಡ್ಡ ಕೊಡುಗೆಯಾಗಲಿದೆ ಎಂದು ಕೇಂದ್ರಿಯ ವಿದ್ಯಾಲಯದ ನಿವೃತ್ತ ಸಹಾಯಕ ಅಧಿಕಾರಿ ಕೆ.ಎಲ್. ನಾಗರಾಜು ಅಭಿಪ್ರಾಯಪಟ್ಟರು.
ಇಲ್ಲಿನ ವಿಪ್ರ ಬಾಂಧವ ಸೇವಾ ಸಮಿತಿ ಸುಬ್ಬರಾಯ ಛತ್ರದಲ್ಲಿ ವಿಪ್ರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಗದು ಪ್ರೋತ್ಸಾಹ ಸಮಾರಂಭದಲ್ಲಿ ಅವರು ಮಾತನಾಡಿದರು.
ಭವಿಷ್ಯದಲ್ಲಿ ಮಕ್ಕಳಿಗೆ ಶಿಕ್ಷಣವೇ ದೊಡ್ಡ ಶಕ್ತಿ. ಸಮುದಾಯದ ಪ್ರಗತಿ, ಏಳಿಗೆಗೆ ಸಂಘಟನೆ ಶಕ್ತಿ ಅವಶ್ಯವಿದೆ. ವಿಪ್ರ ಸಮುದಾಯ ಸಂಘಟಿತರಾಗಬೇಕಿದೆ. ಭವಿಷ್ಯದ ಮಕ್ಕಳ ಶಿಕ್ಷಣಕ್ಕೆ ನಗದು ಪುರಸ್ಕಾರ ಆಸರೆಯಾಗಿದೆ. ಉನ್ನತ ಶಿಕ್ಷಣ ಪಡೆಯಲು ಮುಂದಾಗಿ, ಸಮುದಾಯದ ದಾನಿಗಳ ಸಹಕಾರ ಇದೆ ಎಂದು ಹುರಿದುಂಬಿಸಿದರು.
ಇಸ್ರೋ ನಿವೃತ್ತ ವಿಜ್ಞಾನಿ ಡಾ. ಎಸ್. ಸೀತಾ ಮಾತನಾಡಿ, ಪ್ರತಿಭೆ ಸಾಧಕರ ಸ್ವತ್ತಾಗಿದೆ. ಶಿಕ್ಷಣ ಎಲ್ಲವನ್ನು ಕೊಡಲಿದೆ. ಶ್ರದ್ಧೆ ಸಂಸ್ಕಾರವಿಲ್ಲದ ಓದು ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಎಚ್ಚರಿಸಿದರು.
ಕ್ಲಿಕ್ಸ್ ಕ್ಯಾಂಪಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಟಿ.ಅರಸು ಮಾತನಾಡಿ, ಪ್ರತಿಭೆ ಸಾಧಕರ ಸ್ವತ್ತಾಗಿ ಮಕ್ಕಳಿಗೆ ಲಭಿಸಿದೆ. ಇಂತಹ ಸರಸ್ವತಿ ಪುತ್ರರನ್ನು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವಂತೆ ಮಾಡುವುದು ಹಿರಿಯರ ಕರ್ತವ್ಯವಾಗಿದೆ. ತಮ್ಮ ಸಹಕಾರ ಇಂತಹ ಮಕ್ಕಳಿಗೆ ಸದಾ ಇದೆ ಎಂದು ನುಡಿದರು.
ನಿವೃತ್ತ ಅರಣ್ಯಾಧಿಕಾರಿ ಎಂ.ಎನ್. ಅನಂತಸ್ವಾಮಿ ಮಾತನಾಡಿ, ಬಡತನದ ಓದು ಎಲ್ಲ ರೀತಿಯ ನೋವು ನಲಿವು ಕಲಿಸಿತು. ಪ್ರಾಮಾಣಿಕತೆಯಲ್ಲಿ ರಾಜಿಯಾಗದೆ ಅಧಿಕಾರಾವಧಿಯಲ್ಲಿ ಉತ್ತಮ ಹೆಸರು ಗಳಿಸಿದೆ. ಇಂತಹ ಶಿಸ್ತು ಮಕ್ಕಳು ಅಳವಡಿಸಿಕೊಳ್ಳಬೇಕು ಎಂದು ತಿಳಿ ಹೇಳಿದರು.
ಕಿನ್ಯಾದ ಮುಮುಬಸ ಸಿಮೆಂಟ್ ಕಂಪನಿ ನಿವೃತ್ತ ಹಿರಿಯ ಅಧಿಕಾರಿ ಕೆ.ಎಸ್. ಚಂದ್ರಶೇಖರಯ್ಯ ಮಾತನಾಡಿ, ಎಲ್ಲೆಡೆ ವೃದ್ಧಾಶ್ರಮ ಹೆಚ್ಚುತ್ತಿವೆ. ಪಾಲಕರು ಮಕ್ಕಳಿಗೆ ಶಿಕ್ಷಣ ನೀಡಿ. ಇದೇ ಅಮೂಲ್ಯ ಆಸ್ತಿಯಾಗಲಿದೆ ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಹಾಗೂ ಪದವಿ, ಮೆಡಿಕಲ್, ಇಂಜಿನಿಯರಿಂಗ್ ಮತ್ತಿತರ ಪದವಿ ವ್ಯಾಸಂಗದ ವಿವಿಧ ಜಿಲ್ಲೆಯ 38 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು.
ದಾನಿಗಳಾದ ಇಂದಿರಾ ಭಾರ್ಗವ, ಗುರುಪ್ರಸಾದ್, ಕೆ. ಸತ್ಯನಾರಾಯಣ ಕೊಪ್ಪಲು, ಕೆ.ಎಸ್. ಚಂದ್ರಶೇಖರಯ್ಯ, ಶ್ರೀಮತಿ, ಎಚ್. ಕುಮಾರಸ್ವಾಮಿ, ಕೆ.ಆರ್. ಸತ್ಯನಾರಾಯಣ, ಕೆ.ಎಸ್. ಸುರೇಶ್, ಕೆ.ಎಸ್. ನಾರಾಯಣಸ್ವಾಮಿ, ಡಾ. ಮಧುಸೂಧನ್, ಕೆ.ಎನ್. ರಾಮಚಂದ್ರಭಟ್, ಪ್ರೊ.ಪ್ರಕಾಶ್ ನರಸಿಂಹ, ಕೃಷ್ಣಮೂರ್ತಿ ಮತ್ತಿತರನ್ನು ಸ್ಮರಿಸಲಾಯಿತು.
ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳು ತಮ್ಮ ಓದಿನ ಅನುಭವ ಹಂಚಿಕೊಂಡರು. ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಮಾಜದ ಗಣ್ಯರಿಗೆ ಗೌರವಿಸಲಾಯಿತು.
ಕಿಕ್ಕೇರಿ ಸಮಿತಿಯ ಕೆ.ಬಿ. ವೆಂಕಟೇಶ್, ಮಹಬಲಶರ್ಮ, ಕೆ.ಎಸ್. ಪರಮೇಶ್ವರಯ್ಯ, ಗಣೇಶ್‌ರಾವ್, ಕೆ.ಎಸ್. ಅನಂತಸ್ವಾಮಿ, ಸುರಭಿಶರ್ಮ ಮತ್ತಿತರರು ಭಾಗವಹಿಸಿದ್ದರು.