ಹುಬ್ಬಳ್ಳಿ: ಧಾರವಾಡದ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಆಶ್ರಯದಲ್ಲಿ ನಗರದ ಜೆ.ಜಿ. ಪದವಿಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ ಏರ್ಪಡಿಸಲಾಗಿತ್ತು.
ಪ್ರೊ. ಸೋಮಶೇಖರ ಎಚ್. ಮಾತನಾಡಿ, ಬಾಲ್ಯ ವಿವಾಹ ತಡೆಗೆ ಶಿಕ್ಷಣವೇ ಮದ್ದು. ಪ್ರತಿಯೊಬ್ಬರೂ ಶಿಕ್ಷಣ ಪಡೆದಾಗ ಮಾತ್ರ ಇಂಥ ಅನಿಷ್ಟ ಪದ್ಧತಿ ನಿಮೂಲನೆ ಸಾಧ್ಯ ಎಂದರು.
ಉಪನ್ಯಾಸಕಿ ಮಲ್ಲಮ್ಮ ಯಾಟಗಲ್ ಮಾತನಾಡಿ, ಬಾಲ್ಯ ವಿವಾಹಕ್ಕೆ ಬಡತನ, ಅನಕ್ಷರತೆ, ಮೌಢ್ಯ ಕಾರಣ. ಈ ಮೂರು ನಿಮೂಲನೆ ಮಾಡಿದಾಗ ಮಾತ್ರ ಕೆಟ್ಟ ಪದ್ಧತಿ ಹೋಗಲಿದೆ. ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಉಡುಪಿ ಜಿಲ್ಲೆಯಲ್ಲಿ ಮಾತ್ರ ಬಾಲ್ಯ ವಿವಾಹ ಮುಕ್ತವಾಗಿದೆ. ಇದಕ್ಕೆ ಕಾರಣ ಅಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿದೆ. ಧಾರವಾಡ ಜಿಲ್ಲೆಯನ್ನೂ ಬಾಲ್ಯ ವಿವಾಹ ಮುಕ್ತ ಮಾಡಲು ಸಂಕಲ್ಪ ತೊಡೋಣ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಸಿಂಚನಾ ಹಾವನೂರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪವಿತ್ರಾ ಬುಶೆಟ್ಟಿ, ಅಸಲಾಮ್ ಕೊಂಕಣಿ ಉಪಸ್ಥಿತರಿದ್ದರು. ವೈಷ್ಣವಿ ಕಲ್ಲೋಳಿಮಠ ನಿರೂಪಿಸಿದರು. ಪವಿತ್ರಾ ವಂದಿಸಿದರು.