ಸೋಮವಾರಪೇಟೆ: ಉದ್ಯೋಗಕ್ಕೆ ಶಿಕ್ಷಣ ಎಷ್ಟು ಮುಖ್ಯವೋ ಅಂತೆಯೇ ಬದುಕಿಗೆ ಸಾಮಾನ್ಯ ಜ್ಞಾನವೂ ಅಷ್ಟೇ ಮುಖ್ಯ ಎಂದು ಸಾಂದೀಪನಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಲಿಖಿತ್ ದಾಮೋದರ್ ಹೇಳಿದರು.
ಮೈಸೂರು ರಾಮಕೃಷ್ಣ ವಿದ್ಯಾಶಾಲೆ ಆರಂಭಗೊಂಡು 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಚೌಡ್ಲು ಸಾಂದೀಪನಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಅಂತರ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ನಾವು ಉದ್ಯೋಗ ಕಾರಣಕ್ಕೆ ಶಿಕ್ಷಣಕ್ಕೆ ಆದ್ಯತೆ ಕೊಡುತ್ತಿದ್ದೇವೆ. ಆದರೆ, ಬದುಕಿನಲ್ಲಿ ಸಾಮಾನ್ಯ ಜ್ಞಾನವೆಂಬದು ಇಲ್ಲವಾದರೆ ಜೀವನ ಕಷ್ಟ ಎಂದರು.
ರಾಮಕೃಷ್ಣ ವಿದ್ಯಾಶಾಲೆ ಹಿರಿಯ ಗುರುಗಳಾಗಿದ್ದ ಶಂಭವಾನಂದ ಜಿ ಅವರ ಜ್ಞಾಪಕಾರ್ಥ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ರಾಜ್ಯದ 732 ಕೇಂದ್ರಗಳಲ್ಲಿ ಒಟ್ಟು 17241 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ 100 ಮಕ್ಕಳು ಪಾಲ್ಗೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಎಸ್.ಮಹೇಶ್ ಚಾಲನೆ ನೀಡಿದರು. ರಾಮಕೃಷ್ಣ ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿಗಳಾದ ಎಂ.ಟಿ.ದಾಮೋದರ್, ವಿಕ್ರಂ, ಬಿ.ಎಸ್.ಸುದೀಪ್, ಬಿ.ಎಸ್.ಸಿದ್ದಾರ್ಥ ಇದ್ದರು.