ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಣ ಕೇವಲ ಜ್ಞಾನ, ವಿದ್ಯೆ, ಬುದ್ಧಿಗಾಗಿ ಅಲ್ಲ. ಮಕ್ಕಳಲ್ಲಿ ಸಚ್ಚಾರಿತ್ರ್ಯ ಬೆಳೆಸುವ ಮಾಧ್ಯಮ ಶಿಕ್ಷಣವಾಗಬೇಕಾಗಿದೆ. ಅಂತಹ ಕೆಲಸವನ್ನು ರಾಷ್ಟ್ರೊತ್ಥಾನ ಪರಿಷತ್ ಮಾಡುತ್ತಿದೆ ಎಂದು ಧಾರವಾಡ ಐಐಟಿ ನಿರ್ದೇಶಕ ಡಾ. ವೆಂಕಪ್ಪಯ್ಯ ದೇಸಾಯಿ ಹೇಳಿದರು.
ಇಲ್ಲಿನ ಸತ್ತೂರಿನ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೊತ್ಸವ ಸನಾತನ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕಾರ, ಭಾರತೀಯತೆ, ಸಾಮಾಜಿಕ ಪರಿವರ್ತನೆ ತರುವಂತಹ ಶಿಕ್ಷಣ ಸಮಾಜಕ್ಕೆ ಬೇಕಾಗಿದೆ. ಇಂತಹ ಶಿಕ್ಷಣ ಕೊಡುವುದು ಸವಾಲಿನ ವಿಷಯವೂ ಆಗಿದೆ. ರಾಷ್ಟ್ರೊತ್ಥಾನದಂತಹ ಶಾಲೆಗಳು ಆ ದಿಕ್ಕಿನಲ್ಲಿ ಮುನ್ನಡೆಯುತ್ತಿವೆ. ಇಲ್ಲಿ ಶಿಕ್ಷಣ, ಸಂಸ್ಕಾರ ಪಡೆದ ನಂತರ ಮಕ್ಕಳು ಸಮಾಜಮುಖಿ ಕೆಲಸಗಳಲ್ಲಿ, ಅದರಲ್ಲೂ ಕೂಡ ವನವಾಸಿ ಕಲ್ಯಾಣದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದ ಕಾರ್ಯದರ್ಶಿ ಜಯಣ್ಣ ಎಚ್. ಮಾತನಾಡಿ, ರಾಷ್ಟ್ರೊತ್ಥಾನ ಪರಿಷತ್ ಸ್ವಸ್ಥ, ಸುಸ್ಥಿರ, ಸಮಾಜ ನಿರ್ಮಾಣದ ಗುರಿ ಹೊಂದಿದೆ. ಆ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಕಲಿತ ಮಕ್ಕಳು ದೇಶದ ಆಸ್ತಿಗಳಾಗಲಿ ಎಂದು ಹಾರೈಸಿದರು.
ರಾಘವೇಂದ್ರ ಅಂಬೇಕರ, ಅಶೋಕ ಸೋನಕರ, ರಾಮಚಂದ್ರ ಗುರೂಜಿ, ಇತರರು ಇದ್ದರು. ಗುರುರಾಜ ಅಗಡಿ ಸ್ವಾಗತಿಸಿದರು. ಪ್ರಾಚಾರ್ಯೆ ಡಾ. ಅನಿತಾ ರೈ ವರದಿ ವಾಚಿಸಿದರು. ಲಲಿತಾ ಹೆಬ್ಬಾರ ನಿರೂಪಿಸಿದರು. ಅನುರಾಧ ಎನ್. ವಂದಿಸಿದರು.