ಮೈಸೂರು: ಮನುಷ್ಯನ ವಿಕಾಸಕ್ಕೆ ಶಿಕ್ಷಣ ಅಗತ್ಯವಾಗಿದೆ. ಅದನ್ನು ವೈಜ್ಞಾನಿಕ ಮತ್ತು ವೈಚಾರಿಕವಾಗಿ ಪಡೆಯಬೇಕು ಎಂಬುದು ನಮ್ಮ ಸಂವಿಧಾನದ ಆಶಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದ ಚಾಮರಾಜ ಜೋಡಿರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ(ಎನ್.ಎಂ.ಕೆ.ಎ ಬಾಲಬೋಧಿನಿ) ನವೀಕರಣ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ವಿಷಯವನ್ನೂ ವೈಚಾರಿಕವಾಗಿ ಕಲಿತರೆ ಎಲ್ಲರೂ ಸಮಾಜಕ್ಕೆ ದಾರಿದೀಪವಾಗುತ್ತಾರೆ. ಅದರಂತೆ ಮಕ್ಕಳ ಭವಿಷ್ಯ ಕಟ್ಟಲು ನಿರ್ಮಿಸಿರುವ ಈ ಸರ್ಕಾರಿ ಶಾಲೆಯಲ್ಲಿ ಹೆಚ್ಚಿನ ಮಕ್ಕಳು ದಾಖಲಾಗಿ ಮುಂದಿನ ದಿನಗಳಲ್ಲಿ ಮಾದರಿ ಶಾಲೆಯಾಗಿ ರೂಪುಗೊಳ್ಳುವಂತೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಕಿವಿಮಾತು ಹೇಳಿದರು.
ಎಲ್ಲರೂ ಜಾತಿ, ಧರ್ಮದಿಂದ ಹೊರಬಂದು ನಾವೆಲ್ಲ ಭಾರತೀಯರು ಎಂಬ ಮನೋಭಾವ ಬರಬೇಕು. ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು. ಪ್ರಾಥಮಿಕ ಶಾಲಾ ಮಕ್ಕಳಿಗೆ ಗ್ರಹಿಕಾಶಕ್ತಿ ಹೆಚ್ಚಿರುತ್ತದೆ. ಈ ಅವಧಿಯಲ್ಲಿ ಮಕ್ಕಳಿಕೆ ಗುಣಮಟ್ಟದ ಶಿಕ್ಷಣ ನೀಡಬೇಕು. ಅದು ಹೆಚ್ಚು ದಿನಗಳ ಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದು ತಿಳಿಸಿದರು.
ಸಂಪರ್ಕ ಭಾಷೆಗಾಗಿ ಮಾತ್ರ ಇಂಗ್ಲಿಷ್ ಕಲಿಯಬೇಕು. ಆದರೆ ನಮ್ಮ ಮಾತೃಭಾಷೆ ಕನ್ನಡ ಮಾಧ್ಯಮದಲ್ಲೇ ಮಕ್ಕಳಿಗೆ ಕಲಿಸಬೇಕು. ಸರ್ಕಾರ ಜಾರಿ ಮಾಡುವ ನೂತನ ಪದ್ಧತಿಗಳನ್ನು ಅಳವಡಿಸಿಕೊಂಡು ವಿಜ್ಞಾನವನ್ನು ಸಮರ್ಪವಾಗಿ ಮಾನವನ ಅಭಿವೃದ್ಧಿಗೆ ಬಳಸಿಕೊಳ್ಳಲು ಮೀಸಲಿಡಬೇಕು ಎಂದು ಹೇಳಿದರು.