ಅರಸೀಕೆರೆ (ಗ್ರಾಮಾಂತರ): ಶಿಕ್ಷಣವು ನಮ್ಮೆಲ್ಲರನ್ನು ದುಡಿಮೆಯ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಶೋಷಿತ ಸಮುದಾಯಗಳು ಮುನ್ನೆಲೆಗೆ ಬರಲು ಶಿಕ್ಷಣವು ಬಹುಮುಖ್ಯವಾಗಿದೆ ಎಂದು ಚಿತ್ರದುರ್ಗ ಮಡಿವಾಳ ಮಾಚಿದೇವ ಮಹಾಪೀಠದ ಪೀಠಾಧಿಪತಿ ಡಾ.ಬಸವಮಾಚಿದೇವ ಸ್ವಾಮೀಜಿ ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ಗೀಜಿಹಳ್ಳಿ ಬೈಪಾಸ್ ರಸ್ತೆಯ ಸಮೀಪ ಸೋಮವಾರ, ಮಡಿವಾಳ ಮಾಚಿದೇವ ನೂತನ ಸಮುದಾಯ ಭವನ ನಿರ್ಮಾಣದ ಭೂಮಿ ಪೂಜೆ ಹಾಗೂ ವೇದಿಕೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಡಿವಾಳ ಮಾಚಿದೇವ ಸೇರಿದಂತೆ 12ನೇ ಶತಮಾನದ ಬಸವಾದಿ ಶರಣರು ಹಿಂದಿನ ಹಾಗೂ ಇಂದಿನ ಮನುಕುಲಕ್ಕೆ ಆದರ್ಶವಾಗಿದ್ದಾರೆ. ಮಡಿವಾಳರೆಂದರೆ ಸ್ವಾಭಿಮಾನದ ನಿಷ್ಠಾವಂತ ಪ್ರಾಮಾಣಿಕತೆಗೆ ಹೆಸರಾದವರು. ಮಡಿವಾಳ ಮಾಚಿದೇವ ಸಮುದಾಯ ಭವನ ನಿರ್ಮಾಣದ ಹಿನ್ನೆಲೆಯಲ್ಲಿ ನಾನು ಒಂದು ವಾರದಿಂದ ತಾಲೂಕಿನಲ್ಲಿ ಬೀಡು ಬಿಟ್ಟು ಸಮುದಾಯದವರು ವಾಸವಿರುವ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿದ್ದಾಗಿ ಹೇಳಿದರು.
ತಾಲೂಕಿನಲ್ಲಿ ಶಕ್ತಿ ಇಲ್ಲದ ಶೋಷಿತ ಸಮುದಾಯಗಳನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಪ್ರಾಮಾಣಿಕ ಪ್ರಯತ್ನ ಹಾಗೂ ಸಕಲ ಸಮುದಾಯಗಳನ್ನು ಸಮಾನವಾಗಿ ಕಾಣುವ ಮನೋಧರ್ಮ ಶ್ಲಾಘನೀಯವಾದದ್ದು. ಮಡಿವಾಳ ಮಾಚಿದೇವ ಸಮುದಾಯ ಭವನ ನಿರ್ಮಾಣಕ್ಕೆ ಕೇವಲ 1.5 ಕೋಟಿ ರೂ. ಸಾಲುವುದಿಲ್ಲ. ಸ್ಥಳೀಯ ಶಾಸಕರು ಅವರದೇ ಸರ್ಕಾರವಿದ್ದು, ಕನಿಷ್ಠ 5 ಕೋಟಿ ರೂ. ಮಂಜೂರು ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮಡಿವಾಳ ಸಮುದಾಯದವರ ಕಸುಬನ್ನು ಇತರರೂ ಮಾಡಲು ಪ್ರಾರಂಭಿಸಿದ್ದು, ಮಡಿವಾಳ ಸಮುದಾಯದವರ ವೃತ್ತಿಗೆ ತೊಡಕಾಗಿದೆ. ರಾಜ ಮಹಾರಾಜರ ಕಾಲದಿಂದಲೂ ಮಡಿವಾಳ ಸಮುದಾಯದವರ ಸಾಮಾಜಿಕ ಸೇವೆ ಮರೆಯಲಾಗದು ಎಂದರು.
ತಾಲೂಕಿನಲ್ಲಿ ಬಹುತೇಕ ಎಲ್ಲ ಸಮುದಾಯಗಳಿಗೂ ಸಮುದಾಯ ಭವನಗಳನ್ನು ನಿರ್ಮಿಸಿಕೊಡಲಾಗಿದೆ. ಈ ನಿಟ್ಟಿನಲ್ಲಿ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಮಡಿವಾಳ ಮಾಚಿದೇವ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಈಗಾಗಲೇ 75 ಲಕ್ಷ ರೂ. ಬಿಡುಗಡೆ ಆಗಿದ್ದು, ಇನ್ನುಳಿದ ಅನುದಾನ ಹಂತ ಹಂತವಾಗಿ ಬಿಡುಗಡೆ ಆಗಲಿದೆ. ತಮ್ಮ ವೃತ್ತಿ ಧರ್ಮದ ಜತೆ ಜತೆಗೆ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
12ನೇ ಶತಮಾನಕ್ಕೂ ಮೊದಲು ಶೋಷಿತ ಸಮುದಾಯಗಳನ್ನು ಹೆಚ್ಚು ನಿಷ್ಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಮಹಾ ದೈವ ಪುರುಷ ಬಸವಣ್ಣ ಸಾಮಾಜಿಕ ಸಮಾನತೆಗಾಗಿ ಕ್ರಾಂತಿಯೇ ಮಾಡಿದರು. ಅದನ್ನು ಯಾರೂ ಮರೆಯುವಂತಿಲ್ಲ. ಬಸವಣ್ಣನವರು 12ನೇ ಶತಮಾನದಲ್ಲಿ ಶೋಷಿತ ಸಕಲ ತಳ ಸಮುದಾಯಗಳನ್ನು ತಮ್ಮ ಅನುಭವ ಮಂಟಪದಲ್ಲಿ ಸೇರ್ಪಡೆ ಮಾಡಿಕೊಂಡು ಸಾಮಾಜಿಕ ದಾರಿ ದೀಪವಾಗಿದ್ದಾರೆ ಎಂದರು.
ಮಡಿವಾಳ ಸಮುದಾಯ ಸಮಾಜಕ್ಕೆ ಅನಿವಾರ್ಯ, ಇಂದಿನ ಆಧುನಿಕ ಯುಗದಲ್ಲಿ ಕಾಲಕ್ಕೆ ತಕ್ಕಂತೆ ಹೈಟೆಕ್ ಸಮುದಾಯ ಭವನಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ನಮ್ಮ ಸರ್ಕಾರ ಇನ್ನೂ ಮೂರು ವರ್ಷಗಳ ಕಾಲ ಇರುತ್ತದೆ, ನಾನು ನಮ್ಮ ವಿಧಾನಸಭಾ ಕ್ಷೇತ್ರದ ಜನತೆಗೆ ಕೊಟ್ಟ ಮಾತಿಗೆ ತಪ್ಪುವುದಿಲ್ಲ, ನುಡಿದಂತೆ ನಡೆಯುತ್ತೇನೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಧರ್ಮಶೇಖರ್ ಗೀಜಿಹಳ್ಳಿ ಹಾಗೂ ನಗರಸಭೆ ಅಧ್ಯಕ್ಷ ಎಂ. ಸಮೀವುಲ್ಲಾ ಮಾತನಾಡಿದರು. ತಾಲೂಕು ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಶಿವಣ್ಣ ಬಾಗೇಶಪುರ, ರಾಂಪುರ ಸುರೇಶ್, ದೊಡ್ಡ ಮೇಟಿಕುರ್ಕೆ ಸುರೇಶ್, ಅಶೋಕ್, ತಾಲೂಕು ಮಡಿವಾಳ ಸಮುದಾಯದ ಮುಖಂಡರು ಇತರರು ಇದ್ದರು.