ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಶಿಸ್ತು ಮತ್ತು ಸಂಯಮ ರೂಢಿಸಿಕೊಂಡರೆ ನಿದಿರ್ಷ್ಟ ಗುರಿ ಕಂಡುಕೊಳ್ಳಲು ಸಹಾಯವಾಗುತ್ತದೆ. ಇಂದಿನ ದಿನಗಳಲ್ಲಿ ಉದ್ಯೋಗಾವಕಾಶ ಹೇರಳವಾಗಿದೆ. ಆದರೆ ಕೌಶಲದ ಕೊರತೆಯಿಂದ ನಿರುದ್ಯೋಗದ ಕೊರತೆ ಕಾಡುತ್ತಿದೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಹಾಗೂ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಪೃಥ್ವಿರಾಜ್ ಜಿ.ಪಿ. ಹೇಳಿದರು.
ನಗರದ ಜೆಎಸ್ಎಸ್ನ ಶ್ರೀ ಮಂಜುನಾಥೇಶ್ವರ ಐಟಿಐ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯಾಧಾರಿತ ತರಬೇತಿಯೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ. ಅವುಗಳಲ್ಲಿ ವಿದ್ಯಾಥಿರ್ಗಳು ಭಾಗವಹಿಸಿದರೆ ಆತ್ಮಸ್ಥೈರ್ಯ ಬೆಳೆದು ವ್ಯಕ್ತಿತ್ವ ವಿಕಸನವಾಗಲಿದೆ. ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ವಿನಯವನ್ನೂ ಬೆಳೆಸಿಕೊಳ್ಳಬೇಕು. ಗುರು-ಹಿರಿಯರಿಗೆ, ತಂದೆ-ತಾಯಿಗೆ ಗೌರ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಮಹಾವೀರ ಉಪಾಧ್ಯೆ ಮಾತನಾಡಿ, ಆಥಿರ್ಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಪಾಲಿಗೆ ಐಟಿಐ ತರಬೇತಿ ರಾಮ ಬಾಣವಾಗಿದೆ. ಡಾ. ಡಿ. ವೀರೇಂದ್ರ ಹೆಗ್ಗಡೆ ಆಶಯದಂತೆ ಎಲ್ಲ ಸ್ತರದ ಜನರು ಶಿಕ್ಷಿತರಾಗಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ನೈತಿಕ ಹಾಗೂ ತಾಂತ್ರಿಕ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶಕ್ಕೆ ಧಾರವಾಡದಲ್ಲಿ ಜೆಎಸ್ಎಸ್ ಮತ್ತು ಎಸ್ಡಿಎಂ ಅಡಿ 3 ಐಟಿಐಗಳನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತರಬೇತಿಯೊಂದಿಗೆ ಉದ್ಯೋಗದ ವ್ಯವಸ್ಥೆ ಸಹ ಮಾಡಲಾಗುತ್ತಿದೆ. ಇದರ ಸದುಪಯೋಗ ಪಡೆಯಬೇಕು ಎಂದರು.
ವಿವಿಧ ಸ್ಪರ್ಧೆ ವಿಜೇತರಿಗೆ ಪ್ರಮಾಣಪತ್ರ ಹಾಗೂ ಪ್ರಶಸ್ತಿ ವಿತರಿಸಲಾಯಿತು. ಬಿ.ಎ. ತಡಕೋಡ, ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ, ಇತರರು ಇದ್ದರು.
ವಿನಾಯಕ ಗವಳಿ ಸ್ವಾಗತಿಸಿದರು. ಮಂಜುನಾಥ ಚಟ್ಟೇರ ನಿರೂಪಿಸಿದರು. ವಿದ್ಯಾ ಹಿರೇಮಠ ವಂದಿಸಿದರು.