ಮಡಿಕೇರಿ: ಬುದ್ಧ, ಬಸವ ಹಾಗೂ ಡಾ.ಅಂಬೇಡ್ಕರ್ ಅವರ ಚಿಂತನೆ ಸಾಕಾರಗೊಳ್ಳಲು ಮತ್ತು ಆದರ್ಶಗಳು ಅರ್ಥಪೂರ್ಣಗೊಳ್ಳಲು ಪ್ರತಿಯೊಬ್ಬರು ವಿದ್ಯಾವಂತರಾಗಬೇಕು ಎಂದು ಚಿಕ್ಕಅಳುವಾರು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ ಸಂಗಪ್ಪ ಆಲೂರ ಕರೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ೨೦೨೪-೨೫ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪ್ರೊಫೆಸರ್ ಗಳಾಗಿ ಬಡ್ತಿ ಹೊಂದಿರುವ ಬೋಧಕ ಸಿಬ್ಬಂದಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಕುಲದ ವಿಕಾಸಕ್ಕೆ ಶಿಕ್ಷಣ ಅತ್ಯಗತ್ಯ, ಬುದ್ಧ, ಬಸವ, ಡಾ.ಅಂಬೇಡ್ಕರ್ ಅವರು ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಅನುಭವದ ಸಂಕೇತವಾಗಿದ್ದಾರೆ. ನಮ್ಮ ಅರಿವು ನಮಗೆ ಗುರುವಾಗಬೇಕು, ಸಮಸಮಾಜದ ಕಲ್ಪನೆಯನ್ನು ಸಾಕಾರಗೊಳಿಸಬೇಕು. ಅವರುಗಳ ಅನುಭವವನ್ನು ಅನುಸರಿಸಿ ಅದರ ಆಧಾರದ ಮೇಲೆ ಅತ್ಯುತ್ತಮ ಚೌಕಟ್ಟನ್ನು ಹಾಕಿಕೊಳ್ಳಬೇಕು. ಶಿಕ್ಷಣದ ಅರಿವು ಹೆಚ್ಚಾದರೆ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ. ಸಮಸಮಾಜ ಕಲ್ಪನೆಯನ್ನು ನಡೆಯಾಗಿ, ನುಡಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.
ಸಮಾಜದಲ್ಲಿರುವ ಅಜ್ಞಾನದ ಕತ್ತಲೆಯನ್ನು ಹೊಡೆದೋಡಿಸಬೇಕು, ಜೀವನದಲ್ಲಿ ಕುಬ್ಜ ಮನಸ್ಸುಗಳೊಂದಿಗೆ ಇರುವ ಬದಲು ಉದಾತ್ತ ಚಿಂತನೆ, ತನ್ಮಯ ಭಾವನೆ ಇರುವವರೊಂದಿಗೆ ಇರಬೇಕು. ವ್ಯಕ್ತಿ ಏಕಾಂಗಿಯಾಗಿ ಹೋರಾಟ ನಡೆಸುವ ಮನೋಸ್ಥಿತಿಯನ್ನು ಹೊಂದಬೇಕು. ದೂರದೃಷ್ಟಿಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಹೊಸ ಹುಡುಕಾಟ ಮಾಡಬೇಕು, ಸಮಸ್ಯೆಯನ್ನು ವಿಶ್ಲೇಷಿಸಿ, ಎದುರಿಸಿ, ಪರಿಹರಿಸಿಕೊಳ್ಳುವ ಧೈರ್ಯವನ್ನು ಹೊಂದಬೇಕು. ಜೀವನದ ಕೊನೆಯ ಹಂತದವರೆಗೂ ಸಾಧಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಈ ನಾಡಿನ ಪ್ರಜ್ಞಾವಂತ ಪ್ರಜೆಗಳಾಗಬೇಕು ಎಂದು ಅಶೋಕ ಸಂಗಪ್ಪ ಆಲೂರ ಸಲಹೆ ನೀಡಿದರು.
ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪೂಜನೀಯವಾಗಿದೆ. ಸಮರ್ಥ ಮತ್ತು ಸಮೃದ್ಧ ರಾಷ್ಟ್ರ ನಿರ್ಮಾಣವಾಗಬೇಕಾದರೆ ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡುವ ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಧ್ಯ. ದೇಶ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರು ಮಾಡುತ್ತಿರುವ ಬೋಧನೆ ಬಹು ದೊಡ್ಡದು ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಬೆರಳ ತುದಿಯಲ್ಲಿ ಪ್ರಪಂಚದಲ್ಲಿ ನಡೆಯುವ ವಿಚಾರಗಳನ್ನು ತಿಳಿದುಕೊಳ್ಳಬಹುದು. ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುವಂತಾಗಬೇಕು. ಓದುವ ಅಭ್ಯಾಸ ನಿರಂತರವಾಗಿರಬೇಕು ಮತ್ತು ಗ್ರಂಥಾಲಯಗಳನ್ನು ಬಳಸಿಕೊಳ್ಳಬೇಕು. ಓದಿನ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು. ಆ ಮೂಲಕ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು ಎಂದು ಸಲಹೆ ನೀಡಿದರು.
ಇಂಡಿಯಾ ಪ್ರೈವೇಟ್ ಲಿಮಿಟೆಡ್ ಲೀಡಿಂಗ್ ಎಡ್ಜ್ ಅಡ್ವರ್‌ಟೈಸಿಂಗ್ ನಿರ್ದೇಶಕ ಪ್ರಸನ್ನ ಎಡಿಕೇರಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಹಂತದಲ್ಲೂ ಅಡೆತಡೆಗಳಿರುತ್ತದೆ. ಆದ್ದರಿಂದ ಶ್ರಮಪಟ್ಟಷ್ಟು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಉದ್ಯೋಗವಕಾಶವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್‌ನ ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ ಅವರು ಮಾತನಾಡಿ, ಸಂಘಟನೆಗಳು ಸಾಧಕರನ್ನು ಬೆನ್ನು ತಟ್ಟುವಂತಿರಬೇಕು. ಸಮಾಜಮುಖಿ ಕೆಲಸ ಮಾಡುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸರಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿರುವುದು ವಿಪರ್ಯಾಸ. ಸರಕಾರಿ ಶಾಲೆಗಳು ನೀಡುವ ಶಿಕ್ಷಣವನ್ನು ಖಾಸಗಿ ಶಾಲೆಗಳು ನೀಡಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವಂತಾಗಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟದಲ್ಲಿ ನಾವು ಜಯ ಸಾಧಿಸಬೇಕಾದರೆ ಉತ್ತಮ ಶಿಕ್ಷಣ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಬಿಎ, ಬಿಕಾಂ, ಬಿಸಿಎ, ಬಿಎಸ್‌ಸಿ, ಬಿಬಿಎ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ೧೫ ವಿದ್ಯಾರ್ಥಿಗಳನ್ನು ಹಾಗೂ ಪ್ರೊಫೆಸರ್‌ಗಳಾಗಿ ಬಡ್ತಿ ಹೊಂದಿರುವ ಪ್ರೊ.ಮೇಜರ್ ರಾಘವ.ಬಿ, ಪ್ರೊ.ತಿಪ್ಪೇಸ್ವಾಮಿ.ಇ, ಪ್ರೊ.ಗಾಯತ್ರಿ ದೇವಿ.ಎ, ಪ್ರೊ.ಶ್ರೀಧರ್ ಹೆಗಡೆ, ಪ್ರೊ.ನಾಗರಾಜು ಕೆ.ಪಿ., ಪ್ರೊ.ಕೃಷ್ಣ.ಎಂ.ಪಿ ಹಾಗೂ ಪ್ರೊ.ನಯನ ಕಶ್ಯಪ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿಯ ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ವಹಿಸಿದ್ದರು. ಪ್ರಗತಿಪರ ಚಿಂತಕ ಇಸಾಖ್ ಖಾನ್, ಸಮಾಜ ಸೇವಕರು ಪ್ರದೀಪ್ ಕರ್ಕೇರ, ದಸಂಸ ಪೊನ್ನಂಪೇಟೆ ತಾಲೂಕು ಸಂಚಾಲಕ ಎಚ್.ಆರ್.ಜಗದೀಶ್ ಉಪಸ್ಥಿತರಿದ್ದರು.
ದೇಶದ ಅಭಿವೃದ್ಧಿಗೆ ಶಿಕ್ಷಣ ಅತಿಮುಖ್ಯ
ಪದವಿಯ ನಂತರ ಉದ್ಯೋಗಾವಕಾಶಗಳು ಹಾಗೂ ಉನ್ನತ ವಿದ್ಯಾಭ್ಯಾಸ ಮಾಡಿದರೆ ಸಮಾಜದಲ್ಲಿ ಆಗುವ ಬದಲಾವಣೆ ಎಂಬ ವಿಷಯದ ಕುರಿತು ಮಕ್ಕಳ ತಜ್ಞ ಡಾ.ನವೀನ್.ಬಿ.ಸಿ ಮಾತನಾಡಿ, ದೇಶದ ಅಭಿವೃದ್ಧಿಗೆ ಶಿಕ್ಷಣ ಅತಿಮುಖ್ಯ. ಭಾರತೀಯ ಸಮಾಜದಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನು ಶಿಕ್ಷಣದಿಂದ ಗುರುತಿಸಬಹುದು. ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿಶ್ವದಲ್ಲಿಯೇ ಭಾರತ ೩ನೇ ಸ್ಥಾನದಲ್ಲಿದೆ. ದೇಶದಲ್ಲಿ ಅತಿ ಹೆಚ್ಚು ಮಂದಿ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ, ಶಿಕ್ಷಣ ಕ್ಷೇತ್ರ ಖಾಸಗಿ ಸಂಸ್ಥೆಗಳ ಹಿಡಿತದಲ್ಲಿದೆ. ಮುಂದಿನ ದಿನಗಳಲ್ಲಿ ಸಮಾನತೆಯ ಸಮಾಜವನ್ನು ಸೃಷ್ಟಿ ಮಾಡಬೇಕಾದರೆ ಉನ್ನತ ಶಿಕ್ಷಣದ ಅಗತ್ಯವಿದೆ ಎಂದರು.
ಪದವಿ ಶಿಕ್ಷಣ ಪೂರೈಸಿದವರಿಗೆ ಪ್ರಸ್ತುತ ದಿನಗಳಲ್ಲಿ ವಿಫುಲ ಅವಕಾಶಗಳಿದ್ದು, ವೈಯಕ್ತಿಕ ಆಯ್ಕೆ ಹಾಗೂ ಆಸಕ್ತಿಗೆ ಅನುಗುಣವಾಗಿ ನಾನಾ ಕ್ಷೇತ್ರಗಳಲ್ಲಿ ಕೆಲಸ ಹುಡುಕಿಕೊಳ್ಳಬಹುದು. ಆದರೆ ಯುವ ಜನತೆಯಲ್ಲಿ ಕೌಶಲ್ಯದ ಕೊರತೆ ಇದೆ. ಶಿಕ್ಷಣ ಒಂದು ಜ್ಞಾನ ಸಂಪತ್ತು, ಶಿಕ್ಷಣಕ್ಕೆ ನಿರಂತರ ಬೆಂಬಲ ಮತ್ತು ಪ್ರೋತ್ಸಾಹ ನೀಡಬೇಕು. ಶಿಕ್ಷಣದ ಮಹತ್ವ ಮತ್ತು ಅನಿವಾರ್ಯತೆಯನ್ನು ಎಲ್ಲರೂ ಅರಿತುಕೊಳ್ಳಬೇಕು. ಶಿಕ್ಷಣವನ್ನು ಕೇವಲ ಉದ್ಯೋಗಕ್ಕೆ ಸೀಮಿತಗೊಳಿಸದೆ ಉತ್ತಮ ಸಾಮಾಜಿಕ ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಮತ್ತು ಸಾರ್ಥಕಪಡಿಸಿಕೊಳ್ಳುವುದಕ್ಕೆ ಒತ್ತು ನೀಡಬೇಕು. ಯಶಸ್ಸು ಸಾಧಿಸುವ ಮನೋಭಾವನೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಡಾ.ನವೀನ್ ಹೇಳಿದರು.