Education is essential for the development of mankind 
ಜಿಲ್ಲೆ

ಮನುಕುಲದ ವಿಕಾಸಕ್ಕೆ ಶಿಕ್ಷಣ ಅವಶ್ಯ

Vijayapura - Desk - Doddanagouda Gudihindin

ಕಮತಗಿ: ಮನುಕುಲವು ದೈಹಿಕ, ಬೌದ್ಧಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಪರಿಪೂರ್ಣಗೊಳ್ಳಬೇಕಾದರೆ ಶಿಕ್ಷಣ ಅವಶ್ಯ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ವಜ್ರಮಹೋತ್ಸವದ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 12ನೇ ಹುಚ್ಚೇಶ್ವರ ಶ್ರೀಗಳ ಮಂಟಪ ಹಾಗೂ ಅಮೃತ ಶಿಲಾಮೂರ್ತಿ ಅನಾವರಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ನೂತನ ಮಂಟಪ ಮತ್ತು ಮೂರ್ತಿ ಅನಾವರಣಗೊಳಿಸಿ ಮಾತನಾಡಿದ ಅವರು, ಶಿಕ್ಷಣವು ಮನುಕುಲದ ಸರ್ವ ವಿಕಾಸಕ್ಕೆ ಪೂರಕವಾಗಿದೆ ಎಂದರು.

ಒಂದು ಮರಕ್ಕೆ ಬೇರು ಅಷ್ಟೆ ಮುಖ್ಯವಲ್ಲ. ಅದಕ್ಕೆ ಹೂವು, ಹಣ್ಣು, ಕಾಯಿ ಎಲ್ಲವೂ ಇರಬೇಕು. ಅವಾಗ ಮಾತ್ರ ಆ ವೃಕ್ಷ ಪರಿಪೂರ್ಣತೆ ಪಡೆಯುತ್ತದೆ. ಶಿಕ್ಷಣವೂ ಇದಕ್ಕೆ ಹೊರತಾಗಿಲ್ಲ. ಸಂಸ್ಕೃತಿ ಎನ್ನುವ ಹೂವು, ಕಾಯಿ, ಲ ನೀಡುವುದೇ ನಿಜವಾದ ಶಿಕ್ಷಣ. ಮನುಕುಲದ ಸಾರ್ಥಕತೆ ಅಂದ್ರೆ ದೈಹಿಕ, ಬೌದ್ಧಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಪರಿಪೂರ್ಣಗೊಳ್ಳುವುದು ಎಂದರು.

ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶ್ರೀ ಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದ ಜನರು ಶಿಕ್ಷಣವಂತರಾಗಬೇಕು ಎಂಬ ದೃಷ್ಟಿಯಿಂದ 12ನೇ ಹುಚ್ಚೇಶ್ವರ ಸ್ವಾಮೀಜಿ ಅವರು ಹುಚ್ಚೇಶ್ವರ ವಿದ್ಯಾವರ್ಧಕ ಸಂಘ ಸ್ಥಾಪಿಸಿದ್ದಾರೆ. ಸಂಘದ ಹಿಂದಿನ ಶಿಕ್ಷಕರು, ಆಡಳಿತ ಮಂಡಳಿ ಹಾಗೂ ಹಳೆಯ ವಿದ್ಯಾರ್ಥಿಗಳು ಬೆವರು ಸುರಿಸಿ ಕಟ್ಟಿದ್ದಾರೆ ಎಂದರು.

ನಾಗಠಾಣ ಚನ್ನಮಲ್ಲಿಕಾರ್ಜು ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಠಗಳ ಪರಂಪರೆಯಲ್ಲಿ ಕಮತಗಿ ಹುಚ್ಚೇಶ್ವರ ಮಠವೂ ಒಂದು ಎಂದರು.

ಹೊಸಹಳ್ಳಿ ಜಗದ್ಗುರು ಬೂದೀಶ್ವರ ಸ್ವಾಮೀಜಿ, ಉಪ್ಪಿನಬೆಟಗೇರಿ ಕುಮಾರ ವೀರೂಪಾಕ್ಷ ಸ್ವಾಮೀಜಿ, ಮುನವಳ್ಳಿ ಮುರುಘರಾಜೇಂದ್ರ ಸ್ವಾಮೀಜಿ, ಕುಂದರಗಿ ಅಮರಸಿದ್ಧೇಶ್ವರ ಸ್ವಾಮೀಜಿ, ಹುನಗುಂದ ಅಮರೇಶ್ವರ ದೇವರು, ಗುಳೇದಗುಡ್ಡ ಡಾ.ಶಿವಶರಣ ದೇವರು, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮುರಗೇಶ ಕಡ್ಲಿಮಟ್ಟಿ, ಪಪಂ ಅಧ್ಯಕ್ಷ ರಮೇಶ ಜಮಖಂಡಿ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಆರ್.ಎಸ್. ಲೆಕ್ಕದ, ಸಹಕಾರ್ಯದರ್ಶಿ ವಿದ್ಯಾಧರ ಮಳ್ಳಿ, ಅನಿಲಕುಮಾರ ಹುಚ್ಚೇಶ್ವರಮಠ, ಎಸ್.ಜಿ.ಗುರಿಕಾರ, ಎಂ.ಬಿ.ಶಾಬಾದಿ, ಗಂಗಪ್ಪ ಭೂತಲ, ಆಡಳಿತಾಧಿಕಾರಿ ಅನಿಲಕುಮಾರ ಕಲ್ಯಾಣಶೆಟ್ಟಿ ಇದ್ದರು.

ಕಳೆದ 60 ವರ್ಷಗಳ ಅವಧಿಯಲ್ಲಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಬೋಧಕ-ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ರಜತ ಮಹೋತ್ಸವ ಇಂದು: ಕಮತಪುರದ ಕಾರುಣ್ಯನಿಧಿ 13ನೇ ಹುಚ್ಚೇಶ್ವರ ಸ್ವಾಮೀಜಿ ಅವರ ಪಟ್ಟಾಧಿಕಾರದ ರಜತ ಮಹೋತ್ಸವವನ್ನು ೆ.16ರಂದು ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಪಟ್ಟಣದಲ್ಲಿ ಹುಚ್ಚೇಶ್ವರ ಶ್ರೀಗಳ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ. ಸಂಜೆ 6 ಗಂಟೆಗೆ ಪಟ್ಟಾಧಿಕಾರ ರಜತ ಮಹೋತ್ಸವ, ಬೆಳ್ಳಿ ತುಲಾಭಾರ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಗೆ ಪಟ್ಟಣದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.