ಸಕಲೇಶಪುರ: ಶಿಕ್ಷಣ ಪ್ರತಿಯೊಬ್ಬರ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ತೆಂಕಲಗೋಡು ಮಠದ ಶ್ರೀ ಚನ್ನಸಿದ್ದೇಶ್ವರ ಶಿವಚಾರ್ಯ ಸ್ವಾಮೀಜಿ ಹೇಳಿದರು.
ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀವರ್ಚನ ನೀಡಿ, ಪ್ರತಿಯೊಬ್ಬ ಮಾನವನಿಗೆ ಶಿಕ್ಷಣ ಅತ್ಯಗತ್ಯ. ಅದರಲ್ಲೂ ಸಂಸ್ಕಾರಯುತ ಶಿಕ್ಷಣ ಪಡೆದ ವ್ಯಕ್ತಿ ಉತ್ತಮ ನಾಗರಿಕರಾಗಬಲ್ಲರು. ವಿಪರ್ಯಾಸ ಎಂದರೆ ಶಿಕ್ಷಣ ವ್ಯವಸ್ಥೆ ಎಂಬುದು ಹಲವು ಲೋಪಗಳಿಂದ ಕೂಡಿದ್ದು ದೇಶದ ಅಂತಃಶಕ್ತಿಯ ಬಗ್ಗೆ ತಿಳಿಸಬೇಕಿದ್ದ ಶಿಕ್ಷಣದೇಶದ ಮೇಲೆ ದಾಳಿ ನಡೆಸಿದ ವ್ಯಕ್ತಿಗಳ ಬಗ್ಗೆ ವಿವರಣೆ ನೀಡುತ್ತಿದೆ. ವಿದ್ಯಾರ್ಥಿಗಳು ಕೇಳಿದ್ದನ್ನು ಮನನ ಮಾಡಿಕೊಂಡಾಗ ಮಾತ್ರ ಪ್ರತಿಭಾನ್ವಿತರಾಗಲು ಸಾಧ್ಯ. ಶಿಕ್ಷಕರು ಹಾಗೂ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಿದಾಗ ಮಾತ್ರ ಭವಿಷ್ಯ ಉತ್ತಮವಾಗಿರಲಿದೆ ಎಂದರು.
ಈ ವೇಳೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 95ರಷ್ಟು ಹಾಗೂ ಪಿಯುಸಿಯಲ್ಲಿ ಶೇ.90 ರಷ್ಟು ಅಂಕ ಪಡೆದ ಸುಮಾರು 50ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ವೇಳೆ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಉಪಾಧ್ಯಕ್ಷ ದಿವಾಕರ್, ತಾಲೂಕು ಅಧ್ಯಕ್ಷ ಓಂಕಾರಮೂರ್ತಿ, ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದಿವಾನ್, ಗುರುವೇಗೌಡ ಕಲ್ಯಾಣ ಮಂಟಪ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಡಿ.ಬಸವಣ್ಣ, ಯುವ ಘಟಕದ ಅಧ್ಯಕ್ಷ ಶಶಿಕುಮಾರ್, ಎಂ.ಡಿ.ಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಲೋಕೇಶ್ ಮುಂತಾದವರಿದ್ದರು.