ವಿಜಯವಾಣಿ ಸುದ್ದಿಜಾಲ ಬೈಂದೂರು
ಈ ನೆಲದ ಸಂಸ್ಕೃತಿ ಬೇರಾದ ಯಕ್ಷಗಾನದಂತಹ ಕಲಾ ಪ್ರಕಾರಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿದಾಗ ನೆಲದ ಭಾಷೆ ಸಂಸ್ಕೃತಿ ಸಂರಕ್ಷಿಸಿ ಬೆಳೆಯುವುದಕ್ಕೆ ಸಾಧ್ಯ. ಯಕ್ಷಗಾನದಲ್ಲಿ ವಿದ್ಯಾರ್ಥಿಗಳು ಆಸಕ್ತಿ ಹೊಂದಿ ಭಾಷೆ, ಸಂಸ್ಕೃತಿ ಏಳಿಗೆಗೆ ಕಟಿಬದ್ಧರಾಗಬೇಕು. ಕಲೆ, ಸಾಹಿತ್ಯ, ಸಂಸ್ಕೃತಿ ಒಳಗೊಳ್ಳದ ಶಿಕ್ಷಣ ಪರಿಪೂರ್ಣತೆ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಬೈಂದೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಬೈಂದೂರು ಯಕ್ಷ ಗುರುಕುಲದ ಸಹಯೋಗದಲ್ಲಿ ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ ಕಿಶೋರ ಯಕ್ಷಗಾನ ಸಂಭ್ರಮ- 2024 ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುರಲೀ ಕಡೆಕಾರ್ ಮಾತನಾಡಿದರು. ಹಿರಿಯ ಯಕ್ಷಗಾನ ಕಲಾವಿದ ಹೇರಂಜಾಲು ಸಂಜೀವ ಗಾಣಿಗ ಉದ್ಘಾಟಿಸಿದರು. ಬೈಂದೂರು ಯಕ್ಷ ಗುರುಕುಲ ಸಂಚಾಲಕ ಸುನಿತ್ ಹೊಲಾಡು, ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್ ನಾರಾಯಣ ಎಂ.ಹೆಗಡೆ, ಎಚ್.ಎನ್.ಶೃಂಗೇಶ್ವರ್, ಗಣೇಶ ಬ್ರಹ್ಮಾವರ, ಜಿಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ ಉಪಸ್ಥಿತರಿದ್ದರು.
ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ನಂತರ ಕಂಬದಕೋಣೆ, ಉಪ್ಪುಂದ, ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ದ್ರೌಪತಿ ಪ್ರತಾಪ, ಮೀನಾಕ್ಷಿ ಕಲ್ಯಾಣ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.
ಜಿಲ್ಲಾದ್ಯಂತ ಒಟ್ಟು 91 ಪ್ರೌಢಶಾಲೆಗಳ 2,500 ವಿದ್ಯಾರ್ಥಿಗಳು ಯಕ್ಷಗಾನ ತರಬೇತಿ ಪಡೆದು ವೇಷ ಮಾಡಿದ್ದಾರೆ. ಇದರಲ್ಲಿ ಮೂರನೇ ಎರಡು ಭಾಗ ಹುಡುಗಿಯರು ಹಾಗೂ ಮೂರನೇ ಒಂದು ಭಾಗ ಹುಡುಗರು. 400ಕ್ಕೂ ಹೆಚ್ಚು ಮಕ್ಕಳು ಬೇರೆ ಬೇರೆ ಜಿಲ್ಲೆಗಳಿಂದ ಬಂದವರು. 13 ಕ್ರೈಸ್ತ, 10 ಮುಸ್ಲಿಂ ಹಾಗೂ 10 ಬೇರೆ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳೂ ಸೇರಿ ಪ್ರದರ್ಶನ ನೀಡುತ್ತಿದ್ದಾರೆ. ಹೀಗೆ ಸಮಾಜವನ್ನು ಒಗ್ಗೂಡಿಸುವ ನಮ್ಮ ಮಣ್ಣಿನ ಕಲೆಯನ್ನು ಉಳಿಸಿ, ಬೆಳೆಸಿ ಮಕ್ಕಳಿಗೆ ಪರಿಚಯಿಸುವಲ್ಲಿ ಯಶಸ್ಸು ಕಾಣುತ್ತಿದ್ದು, ಸಾರ್ಥಕ್ಯ ಭಾವನೆ ಮೂಡುತ್ತಿದೆ. -ಮುರಲೀ ಕಡೆಕಾರ್, ಪ್ರಧಾನ ಕಾರ್ಯದರ್ಶಿ, ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್ https://www.vijayavani.net/safe-delivery-in-an-ambulance-2 https://www.vijayavani.net/global-senior-student-friendship-gathering