ಬಾಳೆಹೊನ್ನೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ತಂಡಕ್ಕೆ ಶಾಸಕ ಟಿ.ಡಿ.ರಾಜೇಗೌಡ ಬಹುಮಾನ ವಿತರಿಸಿದರು. ಪ್ರೇಮ್‌ಕುಮಾರ್, ಸಂದೀಪ್ ಇದ್ದರು. 
ಜಿಲ್ಲೆ

ಶಿಕ್ಷಣ ವಿದ್ಯಾರ್ಥಿ ಬದುಕಿನ ಅವಿಭಾಜ್ಯ ಅಂಗ

ಜಿ.ಹೆಚ್. ಧನ್ಯಕುಮಾರ್

ಬಾಳೆಹೊನ್ನೂರು: ಸೀಗೋಡು ಜವಾಹರ್ ನವೋದಯ ವಿದ್ಯಾಲಯಕ್ಕೆ ಅಗತ್ಯವಿರುವ ಹೊರಾಂಗಣ ಜಿಮ್ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 25 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಸೀಗೋಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯಸಭಾ ಸದಸ್ಯ ಜೈ ರಾಮ್ ರಮೇಶ್ ವಿದ್ಯಾಲಯದ ವಿವಿಧ ಅಭಿವೃದ್ಧಿ ಗೆ 54 ಲಕ್ಷ ರೂ.ನೀಡಿದ್ದರು. ನಾನು ಶಾಸಕನಾದ ನಂತರ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ವಿದ್ಯಾಲಯಕ್ಕೆ ಅಗತ್ಯವಿರುವ ಎಲ್ಲ ಬೇಡಿಕೆಗಳನ್ನು ಪೂರೈಸಲು ಬದ್ಧ ಎಂದು ತಿಳಿಸಿದರು.
ಈ ಹಿಂದೆ ವಸತಿ ಶಾಲೆಗಳು ಕೇವಲ ಶ್ರೀಮಂತ ವರ್ಗದವರಿಗೆ ಮಾತ್ರ ಮೀಸಲಾಗಿತ್ತು. ಬಡ ಮಕ್ಕಳು ಇದರಿಂದ ವಂಚಿತರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಜವಾಹರ್ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಿದ್ದರು. ಇಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯದ ಆಧಾರದಲ್ಲಿ ಪ್ರವೇಶ ದೊರೆಯುತ್ತದೆ ಹೊರತು ಯಾವುದೇ ಶಿಾರಸ್ಸು, ಒತ್ತಡಗಳಿಗೆ ಪ್ರವೇಶ ಸಿಗುವುದಿಲ್ಲ. ಶಿಕ್ಷಣ ವಿದ್ಯಾರ್ಥಿಗಳ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಶಿಕ್ಷಣ ಇಲ್ಲದಿದ್ದರೆ ಜೀವನ ಕಷ್ಟವಾಗಲಿದೆ ಎಂದರು.
ನವೋದಯ ವಿದ್ಯಾಲಯದ ಪ್ರಾಚಾರ್ಯ ಆರ್.ಪ್ರೇಮ್‌ಕುಮಾರ್, ಪೋಷಕ ಸಮಿತಿ ಸದಸ್ಯ ಬಿ.ಎಲ್.ಸಂದೀಪ್, ವೆಂಕಟೇಶ್, ಚೈತನ್ಯ ವೆಂಕಿ ಮತ್ತಿತರರು ಹಾಜರಿದ್ದರು.