ವಿಜಯವಾಣಿ ಸುದ್ದಿಜಾಲ ಕೊಕ್ಕಡ
ಶಿಕ್ಷಣ ಬಹಳ ಶಕ್ತಿಯುತವಾದ ಆಯುಧವಾಗಿದೆ. ಪ್ರತಿಯೊಬ್ಬರು ಶಿಕ್ಷಣ ಪಡೆಯಲೇಬೇಕು ಎಂದು ನೆಲ್ಯಾಡಿಯ ಉದ್ಯಮಿ ಶಾಜಿ ಯು.ವಿ.ಹೇಳಿದರು.
ಪಡುಬೆಟ್ಟು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೆಲ್ಯಾಡಿ ಗ್ರಾಪಂ ಅಧ್ಯಕ್ಷ ಸಲಾಂ ಬಿಲಾಲ್ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಶಾಲೆಗೆ 37 ಸಾವಿರ ರೂ.ಮೌಲ್ಯದ ಕಂಪ್ಯೂಟರ್ ಕೊಡುಗೆಯಾಗಿ ನೀಡಿದರು. ನೆಲ್ಯಾಡಿ ಗ್ರಾಪಂ ಅಧ್ಯಕ್ಷ ಸಲಾಂ ಬಿಲಾಲ್, ಪಡುಬೆಟ್ಟು ವಾರ್ಡಿನ ಸದಸ್ಯ ರವಿಪ್ರಸಾದ್ ಶೆಟ್ಟಿ, ಪುಷ್ಪ ಚೆನ್ನಪ್ಪ, ಜಯಲಕ್ಷ್ಮೀ ಪ್ರಸಾದ್, ಪ್ರಕಾಶ್ ಪೂಜಾರಿ ಸಹಕಾರದಿಂದ 8 ಸಾವಿರ ರೂ. ಮೌಲ್ಯದ ಕ್ರೀಡಾ ಸಾಮಗ್ರಿಗಳನ್ನು ಶಾಲೆಗೆ ಹಸ್ತಾಂತರಿಸಿದರು.
ನಿವೃತ್ತ ಎ.ಎಸ್.ಐ ಸ್ಯಾಮುವೆಲ್ ಎಂ.ಐ. ಹೊಸಮಜಲು 16 ಸಾವಿರ ರೂ. ಮೌಲ್ಯದ ಬ್ಯಾಂಡ್ ಸೆಟ್‌ನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ವಿವಿಧ ದತ್ತಿನಿಧಿ ಬಹುಮಾನಗಳನ್ನು ವಿತರಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕಿ ಲೀಲಾವತಿ ಎಂ. ಬಹುಮಾನಗಳ ಪಟ್ಟಿ ವಾಚಿಸಿದರು. ಆಟೋಟ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಗೆ ಧನಸಹಾಯ ಮಾಡಿದ ಮಹಾಪೋಷಕರನ್ನು ಸನ್ಮಾನಿಸಲಾಯಿತು. ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿಚಂದ್ರ ಪಡುಬೆಟ್ಟು, ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ-ಜಾನಕಿ ಅಮ್ಮ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ಸುಬ್ರಹ್ಮಣ್ಯ ಶಗ್ರಿತ್ತಾಯ, ಒಕ್ಕಲಿಗ ಪತ್ತಿನ ಸಹಕಾರಿ ಸಂಘ ಪುತ್ತೂರು ನಿರ್ದೇಶಕ ಪ್ರವೀಣ್ ಕುಂಟ್ಯಾನ, ಉದ್ಯಮಿಗಳಾದ ಕುಶಾಲಪ್ಪ ಕೋಟ್ಯಾನ್, ರಫೀಕ್ ಸೀಗಲ್, ಶೀನಪ್ಪ ಬರೆಮೇಲು, ಜನಾರ್ದನ ಗೌಡ ಕಾನಮನೆ, ಶಾಲಾ ನಾಯಕ ಮಾಸ್ಟರ್ ಸೃಜನ್ ಉಪಸ್ಥಿತರಿದ್ದರು.
ಅಧ್ಯಕ್ಷ ಸುರೇಶ್ ಪಡಿಪಂಡ ಅತಿಥಿಗಳನ್ನು ಸ್ವಾಗತಿಸಿ, ಮುಖ್ಯಶಿಕ್ಷಕ ಜೆಸ್ಸಿ ಕೆ.ಎ ವಾರ್ಷಿಕ ವರದಿ ವಾಚಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಪ್ರಸಾದ್ ಬೀದಿಮಜಲು ವಂದಿಸಿದರು. ಸಹಶಿಕ್ಷಕಿ ಕಮಲಾಕ್ಷಿ ಕೆ. ನಿರೂಪಿಸಿದರು. ಅಂಗನವಾಡಿಯ ಪುಟಾಣಿಗಳಿಂದ,ಪಡುಬೆಟ್ಟು ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕೀರ್ತಿಶೇಷ ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ ಮತ್ತು ಜಾನಕಿ ಅಮ್ಮ ಪ್ರತಿಷ್ಠಾನದ ವತಿಯಿಂದ ಬಾಲಕಲಾವಿದರಿಂದ ಯಕ್ಷಗಾನ ನಡೆಯಿತು.