ಜಿಲ್ಲೆ

ಶಿಕ್ಷಣ ಸಂಸ್ಥೆಗಳ ನಡುವೆ ಸ್ಪರ್ಧೆ ಸಲ್ಲ

ಅಶೋಕ್ ಕುಮಾರ್ ಎನ್

ದೇವದುರ್ಗ: ಪ್ರತಿಷ್ಠೆಗಾಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟದೆ ಜ್ಞಾನವೃದ್ಧಿಗಾಗಿ, ಅನಕ್ಷರತೆ ತೊಲಗಿಸಲು ಸಂಸ್ಥೆ ಸ್ಥಾಪಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳು ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕಿದೆ ಎಂದು ದೇವದುರ್ಗದ ಅರಿವಿನ ಮನೆಯ ಶ್ರೀಗುರುಬಸವ ರಾಜಗುರು ಸ್ವಾಮೀಜಿ ಹೇಳಿದರು.

ತಾಲೂಕಿನ ಹೂವಿನಹೆಡಗಿ ಶ್ರೀಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಭಾನುವಾರ ಮಾತನಾಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ುಕ್ಕಳಿಗೆ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಬಹುತೇಕ ಪಾಲಕರು ಅಂಕ ಗಳಿಸುವ ಶಿಕ್ಷಣದ ಹಿಂದೆ ಬಿದ್ದಿದ್ದಾರೆ ಹೊರತು ಮಕ್ಕಳನ್ನು ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡುತ್ತಿಲ್ಲ. ಪಾಲಕರ ಮನಸ್ಥಿತಿಗೆ ತಕ್ಕಂತೆ ಶಿಕ್ಷಣ ಸಂಸ್ಥೆಗಳು ಸ್ಪರ್ಧೆಗೆ ಬಿದ್ದವರಂತೆ ವರ್ತಿಸುತ್ತಿದ್ದಾರೆ. ಸಮಾಜವನ್ನು ಸುಸ್ಥಿತಿಯತ್ತ ಕರೆದೊಯ್ಯುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಹಿಂದುಳಿದ ತಾಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಶ್ರೀಗುರುಬಸವ ರಾಜಗುರು ಸ್ವಾಮೀಜಿ ತಿಳಿಸಿದರು.

ವಿವಿಧ ಶಾಲೆಗಳ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ದೇವರಗುಂಡಗುರ್ತಿಯ ಮೈಲಾರಲಿಂಗೇಶ್ವರ ಸಂಸ್ಥಾನದ ಶ್ರೀ ನಿಜಲಿಂಗ ಸ್ವಾಮೀಜಿ, ಸೈಯದ್ ಜಹೀರ್ ಪಾಷಾ ತಾತ ಸಾನ್ನಿಧ್ಯ ವಹಿಸಿದ್ದರು.

ಒಕ್ಕೂಟದ ತಾಲೂಕು ಅಧ್ಯಕ್ಷ ಶಂಕರಲಿಂಗಯ್ಯ ತಾತ, ಕಾರ್ಯದರ್ಶಿ ಅಯ್ಯಪ್ಪ ಕೊಂಗಂಡಿ, ವಿ.ಎಂ.ಮೇಟಿ, ನಿಖಿಲ್ ಖೇಣೇದ್, ಶಿಕ್ಷಣ ಸಂಯೋಜಕ ಸುರೇಶ ಪಾಟೀಲ್, ಬಾಬುಅಲಿ ಕರಿಗುಡ್ಡ, ತಿರುಪತಿ ಸೂಗೂರು, ಶರಣಪ್ಪ, ಬಲಭೀಮ ಹೂಗಾರ, ಸುರೇಶ ಪಾಟೀಲ್, ಸುಭಾಷ್ ಪಾಟೀಲ್, ರಾಜಶೇಖರ್, ವಿರೂಪಾಕ್ಷಿ ಹದ್ದಿನಾಳ ಇದ್ದರು.